ಬೆಂಗಳೂರು: ಐಪಿಎಲ್ 2026ರ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ವೇಗಿ ಯಶ್ ದಯಾಲ್ ಅವರು ದೂರ ಉಳಿದಿರುವುದು ಕ್ರೀಡಾ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಯಶ್ ದಯಾಲ್, ಈ ನಿರ್ಧಾರ ತನ್ನದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಐಪಿಎಲ್ 2026ರ ಆರಂಭಕ್ಕೂ ಮುನ್ನ, ಯಶ್ ದಯಾಲ್ ಅವರು “ವೈಯಕ್ತಿಕ ಕಾರಣಗಳಿಂದಾಗಿ” ಈ ಆವೃತ್ತಿಯಲ್ಲಿ ಆಡುವುದಿಲ್ಲ ಎಂದು ಆರ್‌ಸಿಬಿ ತಂಡದ ಕ್ರಿಕೆಟ್ ನಿರ್ದೇಶಕ ಮೋ ಬಾಬತ್ ತಿಳಿಸಿದ್ದರು. ಆದಾಗ್ಯೂ, ಅವರು ತಂಡದ ಒಪ್ಪಂದದಲ್ಲೇ (Contract) ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಲಾಗಿತ್ತು.
‘ಟಾಕ್ ವಿಥ್ ಮನ್ವೇಂದ್ರ’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಯಶ್ ದಯಾಲ್, “ನಾನು ಈ ಸೀಸನ್‌ನಿಂದ ದೂರ ಉಳಿಯಲು ನಿರ್ಧರಿಸಿದ್ದು ನನ್ನ ವೈಯಕ್ತಿಕ ಆಯ್ಕೆಯಾಗಿರಲಿಲ್ಲ. ಇದು ವಿವಾದಾತ್ಮಕವಾಗಿ ಕಾಣಬಹುದು, ಆದರೆ ತಂಡದ ವಿಷಯಗಳಲ್ಲಿ ಅಂತಿಮ ನಿರ್ಧಾರವನ್ನು ಯಾವಾಗಲೂ ಆಡಳಿತ ಮಂಡಳಿ (Authority) ತೆಗೆದುಕೊಳ್ಳುತ್ತದೆ. ಈ ನಿರ್ಧಾರದ ಹಿಂದಿನ ನಿಖರವಾದ ಕಾರಣ ನನಗೆ ತಿಳಿದಿಲ್ಲ” ಎಂದು ಹೇಳಿದ್ದಾರೆ.
ತಾನು ತಂಡದಿಂದ ಹೊರಬಿದ್ದಿಲ್ಲ ಮತ್ತು ಆರ್‌ಸಿಬಿ ತನ್ನನ್ನು ತಂಡದಿಂದ ಬಿಡುಗಡೆ ಮಾಡಿಲ್ಲ ಅಥವಾ ತಮ್ಮ ಬದಲಿಗೆ ಬೇರೆ ಆಟಗಾರನನ್ನೂ ಆಯ್ಕೆ ಮಾಡಿಲ್ಲ ಎಂದು ಯಶ್ ದಯಾಲ್ ತಿಳಿಸಿದ್ದಾರೆ. “ಅವರು ನನ್ನನ್ನು ರಿಟೈನ್ ಮಾಡಿಕೊಂಡಿದ್ದಾರೆ ಎಂದರೆ, ನಾನು ತಂಡಕ್ಕೆ ಮುಖ್ಯ ಎಂದು ಅವರು ಭಾವಿಸಿದ್ದಾರೆ ಎಂದರ್ಥ. ನಾನು ತಂಡವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿರ್ದೇಶಕರು, ಕೋಚ್ ಮತ್ತು ದಿನೇಶ್ ಕಾರ್ತಿಕ್ ಅವರೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ, ನಮ್ಮ ನಡುವೆ ಯಾವುದೇ ಸಂವಹನ ಕೊರತೆ ಇಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.








