ನವದೆಹಲಿ: ಸಿಬಿಎಸ್‌ಇ (CBSE) 12ನೇ ತರಗತಿಯ ಮೌಲ್ಯಮಾಪನ ಪ್ರಕ್ರಿಯೆಯಲ್ಲಿನ ತಾಂತ್ರಿಕ ದೋಷಗಳು ಮತ್ತು ಉತ್ತರ ಪತ್ರಿಕೆಗಳ ಅದಲು-ಬದಲು (Mismatch) ವಿವಾದ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ವಿಷಯವಾಗಿ ಧ್ವನಿ ಎತ್ತಿದ ವಿದ್ಯಾರ್ಥಿಯೊಬ್ಬನನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿದ್ದು, ಈ ಕುರಿತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯ ವಿದ್ಯಾರ್ಥಿ ವೇದಾಂತ ಶ್ರೀವಾಸ್ತವ ಅವರು ಭೌತಶಾಸ್ತ್ರ ಪರೀಕ್ಷೆಯಲ್ಲಿ ತಮಗೆ ಬಂದಿರುವ ಅಂಕಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಸಿಬಿಎಸ್‌ಇ ಒದಗಿಸಿದ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಯನ್ನು ಪರಿಶೀಲಿಸಿದಾಗ, ಅದು ತಮ್ಮದಲ್ಲ ಎಂಬುದು ವೇದಾಂತ ಅವರ ಗಮನಕ್ಕೆ ಬಂದಿದೆ. ಇಂಗ್ಲಿಷ್ ಮತ್ತು ಕಂಪ್ಯೂಟರ್ ಸೈನ್ಸ್ ಪತ್ರಿಕೆಗಳ ಹಸ್ತಪ್ರತಿ (Handwriting) ಭೌತಶಾಸ್ತ್ರ ಪತ್ರಿಕೆಯ ಹಸ್ತಪ್ರತಿಯೊಂದಿಗೆ ತಾಳೆಯಾಗುತ್ತಿಲ್ಲ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಸಾಕ್ಷ್ಯ ಸಮೇತ ಪ್ರಶ್ನಿಸಿದ್ದರು.
ತಮ್ಮ ಭವಿಷ್ಯದ ಬಗ್ಗೆ ಕಾಳಜಿ ವಹಿಸಿ ಪ್ರಶ್ನೆ ಕೇಳಿದ ವೇದಾಂತ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಟ್ರೋಲ್ ಮಾಡಿ, ಅವರು ಪಾಕಿಸ್ತಾನಿ ಎಂದು ಹೀಯಾಳಿಸಿ ‘ದೇಶದ್ರೋಹಿ’ ಎಂದು ಕರೆದರು. ಅವರ ಸಾಮಾಜಿಕ ಜಾಲತಾಣದ ಖಾತೆಯ ಸ್ಥಳದ (Location) ತಾಂತ್ರಿಕ ದೋಷವನ್ನು ನೆಪವಾಗಿಸಿಕೊಂಡು ಈ ಅಪಪ್ರಚಾರ ನಡೆಸಲಾಯಿತು.
ವಿದ್ಯಾರ್ಥಿಯ ಪರ ಬ್ಯಾಟ್ ಬೀಸಿರುವ ರಾಹುಲ್ ಗಾಂಧಿ, “ತಮ್ಮ ಉತ್ತರ ಪತ್ರಿಕೆ ಸರಿಯಾಗಿ ಮೌಲ್ಯಮಾಪನವಾಗಿಲ್ಲ ಎಂದು ನ್ಯಾಯಕ್ಕಾಗಿ ಸಾಮಾಜಿಕ ಜಾಲತಾಣದ ಮೊರೆ ಹೋದ 17 ವರ್ಷದ ಬಾಲಕನಿಗೆ ಸಿಕ್ಕಿದ್ದು ಸಹಾಯವಲ್ಲ, ಬದಲಾಗಿ ಅವಮಾನ. ಬಿಜೆಪಿ ಐಟಿ ಸೆಲ್ ಆತನನ್ನು ‘ದೇಶದ್ರೋಹಿ’ ಎಂದು ಕರೆದಿದೆ. ಮೋದಿ ಸರ್ಕಾರಕ್ಕೆ ಯುವಕರನ್ನು ಮತ್ತು Gen-Z ತಲೆಮಾರನ್ನು ಕಂಡರೆ ಭಯ, ಏಕೆಂದರೆ ಅವರು ಪ್ರಶ್ನಿಸಲು ಶುರು ಮಾಡಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ವಿದ್ಯಾರ್ಥಿಯ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಿಬಿಎಸ್‌ಇ, ತಾಂತ್ರಿಕ ದೋಷದಿಂದಾಗಿ ಉತ್ತರ ಪತ್ರಿಕೆ ಅದಲು-ಬದಲಾಗಿರುವುದನ್ನು ಒಪ್ಪಿಕೊಂಡಿದೆ. ಸದ್ಯ ಮಂಡಳಿಯು ವಿದ್ಯಾರ್ಥಿಗೆ ಸರಿಯಾದ ಉತ್ತರ ಪತ್ರಿಕೆಯನ್ನು ಇಮೇಲ್ ಮೂಲಕ ಕಳುಹಿಸಿದ್ದು, ಅಂಕಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿದೆ.
ಈ ವಿವಾದದ ಹಿನ್ನೆಲೆಯಲ್ಲಿ, ಸಿಬಿಎಸ್‌ಇ ಮೌಲ್ಯಮಾಪನ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಐಐಟಿ ಮದ್ರಾಸ್ ಮತ್ತು ಐಐಟಿ ಕಾನ್ಪುರದ ತಜ್ಞರನ್ನು ನೇಮಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.








