ನವದೆಹಲಿ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿ ಮಾಡಿರುವ ಕಾಕ್ರೋಚ್ ಜನತಾ ಪಾರ್ಟಿಯನ್ನು (ಸಿಜೆಪಿ) ಅಷ್ಟೊಂದು ಭಾವನಾತ್ಮಕವಾಗಿ ನೋಡಬೇಡಿ ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾ. ಸೂರ್ಯಕಾಂತ್ ಸೋಮವಾರ ಹೇಳಿದ್ದಾರೆ.
ಸಿಜೆಐ ಹೇಳಿಕೆಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ ಸಿಜೆಪಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳ ತುರ್ತು ವಿಚಾರಣೆಗೆ ನಿರಾಕರಿಸಿದ ಸಿಜೆಐ ಸೂರ್ಯಕಾಂತ್ ಅವರನ್ನೊಳಗೊಂಡ ಪೀಠ, ‘ಅರ್ಜಿದಾರರು ಸಿಜೆಪಿಯ ಅಷ್ಟೊಂದು ಭಾವನಾತ್ಮಕವಾಗಿ ನೋಡುವ ಅವಶ್ಯಕತೆ ಇಲ್ಲ. ಅರ್ಜಿಯ ತುರ್ತುವಿಚಾರಣೆಯ ಅನಿವಾರ್ಯತೆಯೂ ಇಲ್ಲ’ ಎಂದು ಹೇಳಿತು.
ಇತ್ತೀಚೆಗೆ ನ್ಯಾ. ಸೂರ್ಯಕಾಂತ್ ‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳ ರೀತಿ ವರ್ತಿಸುತ್ತಿದ್ದಾರೆ’ ಎಂಬ ಹೇಳಿಕೆ ನೀಡಿದ್ದರು. ಇದು ಸಂಚಲನ ಸೃಷ್ಟಿಸಿದ ಬೆನ್ನಲ್ಲೇ, ತಾನು ನಕಲಿ ಪದವಿ ಪಡೆದು ಕಾನೂನು ವೃತ್ತಿ ಮಾಡುತ್ತಿರುವವರನ್ನು ಉಲ್ಲೇಖಿಸಿ ಆ ಮಾತು ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದ್ದರು. ಅದರ ಹೊರತಾಗಿಯೂ ಅವರು ನೀಡಿದ್ದ ಹೇಳಿಕೆಯನ್ನೇ ಆಧರಿಸಿ ಆನ್‌ಲೈನ್‌ನಲ್ಲಿ ಕಾಕಿಕ್ರೋಚ್ ಜನತಾ ಪಾರ್ಟಿ ಹೆಸರಿನಲ್ಲಿ ಅಭಿಯಾನ ಆರಂಭವಾಗಿತ್ತು. ಹೀಗಾಗಿ ಸ್ವತಃ ಸಿಜೆಐ ಸ್ಪಷ್ಟನೆ ನೀಡಿದ ಹೊರತಾಗಿಯೂ ಹೇಳಿಕೆಯನ್ನು ಸಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.








