ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಹೊರವಲಯದಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಆಟೋಗೆ ಕಂಟೇನರ್ ಡಿಕ್ಕಿಯಾದ ರಭಸಕ್ಕೆ ಆರು ಜನ ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಾಗೇಪಲ್ಲಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44ರ (NH 44) ಗಂಗೋತ್ರಿ ಪೆಟ್ರೋಲ್ ಬಂಕ್ ಬಳಿ ಈ ಕರುಣಾಜನಕ ಘಟನೆ ನಡೆದಿದೆ.
ಮನೆಗೆ ಮರಳುವಾಗ ಎದುರಾಯ್ತು ಕಾಳದೂತ
ಮೃತಪಟ್ಟವರೆಲ್ಲರೂ ದಿನಗೂಲಿ ಕೆಲಸಕ್ಕೆ ತೆರಳಿದ್ದ ಕಾರ್ಮಿಕರಾಗಿದ್ದಾರೆ. ದಿನವಿಡೀ ಕಷ್ಟಪಟ್ಟು ದುಡಿದು, ಕೆಲಸ ಮುಗಿಸಿಕೊಂಡು ಆಟೋದಲ್ಲಿ ತಮ್ಮ ಮನೆಗಳಿಗೆ ವಾಪಸ್ ಮರಳುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ವೇಗವಾಗಿ ಬಂದ ಕಂಟೇನರ್ ಆಟೋಗೆ ಭೀಕರವಾಗಿ ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಆಟೋ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.
ಸದ್ಯಕ್ಕೆ ಮೃತಪಟ್ಟ ದುರ್ದೈವಿಗಳ ಇನ್ನುಳಿದ ಹೆಚ್ಚಿನ ವಿವರ ಹಾಗೂ ಹೆಸರುಗಳು ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಬಾಗೇಪಲ್ಲಿ ಠಾಣೆಯ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಅಪಘಾತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಕಡುಬಡತನದಲ್ಲಿ ದಿನವಿಡೀ ಕೂಲಿ ಮಾಡಿ ಮನೆಗೆ ಹಿಂತಿರುಗುತ್ತಿದ್ದ ಕಾರ್ಮಿಕರು ಸಾವನ್ನಪ್ಪಿರುವುದು ಸ್ಥಳೀಯರಲ್ಲಿ ತೀವ್ರ ಕಣ್ಣೀರು ತರಿಸಿದೆ.








