ಬೆಂಗಳೂರು: ಕೊನೆಗೂ ಕರ್ನಾಟಕ ಕಾಂಗ್ರೆಸ್ನ ( Karnataka Congress ) ಆಪದ್ಬಾಂಧವ, ‘ಟ್ರಬಲ್ ಶೂಟರ್’ ಎಂದೇ ಖ್ಯಾತರಾದ ಡಿ.ಕೆ. ಶಿವಕುಮಾರ್ ( DK Shivakumar ) ಅವರ ರಾಜಕೀಯ ಜೀವನದ ಬಹುದೊಡ್ಡ ಕನಸು ನನಸಾಗಿದೆ. ಪಕ್ಷ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದ್ದಾಗ ಬೆನ್ನೆಲುಬಾಗಿ ನಿಂತು, ವರಿಷ್ಠರ ನಂಬಿಕೆಯನ್ನು ಉಳಿಸಿಕೊಂಡಿದ್ದ ಈ ನಿಷ್ಠಾವಂತ ನಾಯಕನಿಗೆ ಹೈಕಮಾಂಡ್ ‘ಬಹುಪರಾಕ್’ ಎಂದಿದೆ. ಅವರ ಸುದೀರ್ಘ ಶ್ರಮಕ್ಕೆ ತಕ್ಕ ಪ್ರತಿಫಲ ಎನ್ನುವಂತೆ ರಾಜ್ಯದ ಅತ್ಯುನ್ನತ ‘ಮುಖ್ಯಮಂತ್ರಿ’ ಸ್ಥಾನದ ಉಡುಗೊರೆ ಲಭಿಸಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ನಾಯಕನಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿದೆ. ಬುಧವಾರ ಸಂಜೆ ಉಪಮುಖ್ಯಮಂತ್ರಿ ಹುದ್ದೆಯಿಂದ ಮುಖ್ಯಮಂತ್ರಿ ಹುದ್ದೆಗೆ ಬಡ್ತಿ ಪಡೆದಿರುವ ‘ಕನಕಪುರ ಬಂಡೆ’, ಇದೀಗ ರಾಜ್ಯದ ಅತ್ಯುನ್ನತ ಕುರ್ಚಿ ಏರಲು ಸರ್ವಸನ್ನದ್ಧರಾಗಿದ್ದಾರೆ.
ಕಲ್ಲು-ಮುಳ್ಳಿನ ಹಾದಿ, ನಿದ್ದೆಯಿಲ್ಲದ ರಾತ್ರಿಗಳು!
ಡಿ.ಕೆ. ಶಿವಕುಮಾರ್ ಅವರ ಇಂದಿನ ಸಾಧನೆಯ ಹಿಂದೆ ಸುಲಭದ ಹಾದಿಯೇನೂ ಇರಲಿಲ್ಲ. ಆ ಪಯಣ ಕಲ್ಲು-ಮುಳ್ಳುಗಳಿಂದ ಕೂಡಿತ್ತು. ಪಕ್ಷವನ್ನು ಸಂಘಟಿಸಲು ಮತ್ತು ಉಳಿಸಿಕೊಳ್ಳಲು ಅವರು ನಡೆಸಿದ ಹೋರಾಟಗಳು, ಅನುಭವಿಸಿದ ನಿದ್ದೆಯಿಲ್ಲದ ರಾತ್ರಿಗಳು ಅಸಂಖ್ಯಾತ. ಎಂಥದ್ದೇ ಕಠಿಣ ಪರಿಸ್ಥಿತಿ ಎದುರಾದರೂ ಅಂಜಿಕೆ-ಅಳಕಿಲ್ಲದೆ ಮುನ್ನುಗ್ಗುವ ಮನೋಬಲ, ಹಿಂಜರಿತವಿಲ್ಲದ ಗುಣ ಮತ್ತು ಪಕ್ಷದ ಮೇಲಿರುವ ಅಚಲವಾದ ಕಮಿಟ್ಮೆಂಟ್ ಇವತ್ತು ಅವರನ್ನು ಮುಖ್ಯಮಂತ್ರಿ ಸ್ಥಾನದವರೆಗೆ ತಂದು ನಿಲ್ಲಿಸಿದೆ. ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಜೀವನ ಆರಂಭಿಸಿದ ಅವರು, ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅಪಾರ ಅನುಭವದೊಂದಿಗೆ ದಿನದಿಂದ ದಿನಕ್ಕೆ ರಾಜಕೀಯದಲ್ಲಿ ಮಾಗುತ್ತಾ, ಇಂದು ಪಕ್ವಗೊಂಡ ಹಣ್ಣಾಗಿ ಅತಿದೊಡ್ಡ ಹುದ್ದೆಯನ್ನು ಅಲಂಕರಿಸುತ್ತಿದ್ದಾರೆ.
ತಮ್ಮ ನೇರ ಹಾಗೂ ನಿಷ್ಠುರ ಮಾತುಗಳಿಂದಲೇ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿರುವ ಡಿ.ಕೆ. ಶಿವಕುಮಾರ್, ಆರಂಭದಲ್ಲೇ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬವನ್ನು ಎದುರು ಹಾಕಿಕೊಂಡು ರಾಜಕೀಯದಲ್ಲಿ ನೆಲೆವೂರಿದವರು. ಆ ಮೂಲಕ ಹಂತ ಹಂತವಾಗಿ ಬೆಳೆದು ಇಂದು ರಾಜ್ಯದ ಪ್ರಮುಖ ಒಕ್ಕಲಿಗ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಕೇವಲ ರಾಜ್ಯದಲ್ಲಷ್ಟೇ ಅಲ್ಲದೆ, ರಾಷ್ಟ್ರ ಮಟ್ಟದ ರಾಜಕಾರಣದಲ್ಲೂ ಹೈಕಮಾಂಡ್ಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿರುವ ಚತುರ ರಾಜಕಾರಣಿ ಇವರು.
ದೇಶದಾದ್ಯಂತ ಕಾಂಗ್ರೆಸ್ ಕಾಯ್ದ ‘ಡಿಕೆಶಿ’ ಹೋರಾಟದ ಹಾದಿ:
ಡಿ.ಕೆ. ಶಿವಕುಮಾರ್ ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಕಷ್ಟ ಎದುರಾದಾಗಲೆಲ್ಲಾ ರಕ್ಷಣಾ ಕವಚವಾಗಿ ನಿಂತ ಇತಿಹಾಸವಿದೆ:
-
2002ರ ಮಹಾರಾಷ್ಟ್ರ ಬಿಕ್ಕಟ್ಟು: ಮಹಾರಾಷ್ಟ್ರದ ವಿಲಾಸ್ ರಾವ್ ದೇಶಮುಖ್ ಸರ್ಕಾರಕ್ಕೆ ಆಪತ್ತು ಎದುರಾದಾಗ, ಅಂದು ಕಾಂಗ್ರೆಸ್ ನೆರವಿಗೆ ಧಾವಿಸಿದ್ದು ಇದೇ ಡಿ.ಕೆ. ಶಿವಕುಮಾರ್. ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕರಿಗೆ ಬೆಂಗಳೂರಿನಲ್ಲಿ 10 ದಿನಗಳ ಕಾಲ ಸುರಕ್ಷಿತ ಆತಿಥ್ಯ ನೀಡಿ ಸರ್ಕಾರವನ್ನು ಉಳಿಸಿದ್ದರು.
-
2017ರ ಅಹ್ಮದ್ ಪಟೇಲ್ ಚುನಾವಣೆ: ರಾಜ್ಯಸಭೆಗೆ ಅಹ್ಮದ್ ಪಟೇಲ್ ಸ್ಪರ್ಧಿಸಿದಾಗ ಹೈಕಮಾಂಡ್ಗೆ ದೊಡ್ಡ ಸವಾಲಿತ್ತು. ಆ ಸಂದರ್ಭದಲ್ಲಿ ಗುಜರಾತ್ ಕಾಂಗ್ರೆಸ್ ಶಾಸಕರನ್ನು ಕರ್ನಾಟಕದ ರೆಸಾರ್ಟ್ನಲ್ಲಿ ಸುರಕ್ಷಿತವಾಗಿರಿಸಿ, ಕಾಂಗ್ರೆಸ್ ಪಕ್ಷದ ಬಲ ಕಾಯ್ದುಕೊಳ್ಳುವ ತಂತ್ರದಲ್ಲಿ ಡಿಕೆಶಿ ಯಶಸ್ವಿಯಾಗಿದ್ದರು.
-
2018ರ ದೋಸ್ತಿ ಸರ್ಕಾರ ರಚನೆ: ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗುವಲ್ಲಿ ಮತ್ತು ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಡಿಕೆಶಿ ಪ್ರಮುಖ ಪಾತ್ರ ವಹಿಸಿದ್ದರು.
-
2024ರ ಹಿಮಾಚಲ ಪ್ರದೇಶದ ಭಿನ್ನಮತ ಶಮನ: ರಾಜ್ಯಸಭಾ ಚುನಾವಣೆ ವೇಳೆ ಹಿಮಾಚಲ ಪ್ರದೇಶದ ಕಾಂಗ್ರೆಸ್ನ 6 ಶಾಸಕರು ಅಡ್ಡಮತದಾನಕ್ಕೆ ಮುಂದಾಗಿ ಸರ್ಕಾರ ಉರುಳುವ ಭೀತಿ ಎದುರಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಡಿಕೆಶಿ, ಅಲ್ಲಿನ ಭಿನ್ನಮತವನ್ನು ಯಶಸ್ವಿಯಾಗಿ ಶಮನಗೊಳಿಸಿ ಸರ್ಕಾರವನ್ನು ರಕ್ಷಿಸಿದ್ದರು.
ಶ್ರಮಕ್ಕೆ ಸಿಕ್ಕ ಸೂಕ್ತ ‘ಕೂಲಿ’
ಇಷ್ಟೆಲ್ಲಾ ರಾಜಕೀಯ ಪಟ್ಟುಗಳ ಮೂಲಕ ತಮ್ಮ ಚಾಣಾಕ್ಷತನ ಪ್ರದರ್ಶಿಸಿರುವ ಡಿ.ಕೆ. ಶಿವಕುಮಾರ್, ಕೇವಲ ಒಬ್ಬ ನಾಯಕನಾಗಿ ಮಾತ್ರ ಉಳಿದಿಲ್ಲ; ರಾಜ್ಯದಲ್ಲಿ ಕಾಂಗ್ರೆಸ್ ನಡೆಸಿದ ಅನೇಕ ಜನಪರ ಹಾಗೂ ರಾಜಕೀಯ ಹೋರಾಟಗಳ ಮುಂಚೂಣಿಯನ್ನು ವಹಿಸಿದ್ದರು.
ಪಕ್ಷದ ಏಳಿಗೆಗಾಗಿ ನಿರಂತರವಾಗಿ ದುಡಿದ ಹೆಗಲಿಗೆ ಹೈಕಮಾಂಡ್ ಈಗ ಸೂಕ್ತ ‘ಕೂಲಿ’ಯನ್ನು ನೀಡಿದೆ. ಆ ಮೂಲಕ ಕನಕಪುರದ ಜನಸಾಮಾನ್ಯರ ನಾಯಕನಾಗಿದ್ದ ಡಿ.ಕೆ. ಶಿವಕುಮಾರ್, ಇಡೀ ರಾಜ್ಯದ ನಾಯಕನಾಗಿ ಸಿಎಂ ಕುರ್ಚಿ ಏರುತ್ತಿರುವುದು ಅವರ ಅಭಿಮಾನಿಗಳಲ್ಲಿ ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಉತ್ಸಾಹವನ್ನು ತುಂಬಿದೆ.








