ಮೈಸೂರು: ರಾಜ್ಯ ರಾಜಕಾರಣದ ಹೈಡ್ರಾಮಾಕ್ಕೆ ಹೊಸ ತಿರುವು ಸಿಕ್ಕಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಸಿದ್ದರಾಮಯ್ಯ (Siddaramaiah) ತರಾತುರಿಯಲ್ಲಿ ದೆಹಲಿಗೆ ವಿಮಾನ ಹತ್ತಿದ್ದರ ಹಿಂದಿನ ಅಸಲಿ ರಹಸ್ಯ ಎರಡು ದಿನಗಳ ಬಳಿಕ ಕೊನೆಗೂ ಬಹಿರಂಗವಾಗಿದೆ. ಸಿದ್ದರಾಮಯ್ಯ ಅವರ ಈ ದಿಢೀರ್ ದೆಹಲಿ ಪ್ರವಾಸದ ಹಿಂದೆ ಒಂದು ‘ಮಹಾ ಮಾಸ್ಟರ್ ಪ್ಲ್ಯಾನ್’ ಅಡಗಿತ್ತು ಎಂಬುದು ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮೂಡುವ ‘ಅನುಕಂಪದ ಅಲೆ’ಯನ್ನು ತಮಗೆ ಪೂರಕವಾಗಿ ಬಳಸಿಕೊಳ್ಳಲು ಸಿದ್ದರಾಮಯ್ಯ ಯೋಚಿಸಿದ್ದರು. ಇದೇ ಬಿಸಿಯಲ್ಲಿ ಹೈಕಮಾಂಡ್ (Congress High Command) ಮುಂದೆ ಹೊಸ ಪ್ಲ್ಯಾನ್ಶೀಟ್ ಒಂದನ್ನು ಇಟ್ಟು ಸಮ್ಮತಿ ಪಡೆಯಬಹುದು ಎಂದು ಅವರು ಲೆಕ್ಕಾಚಾರ ಹಾಕಿದ್ದರು. ಅದರಂತೆ ಕಳೆದ ಗುರುವಾರ ಸಂಜೆ ದೆಹಲಿಯಲ್ಲಿ ಎಐಸಿಸಿ ನಾಯಕರ ಮುಂದೆ ಸಿದ್ದರಾಮಯ್ಯ ಹೊಸ ದಾಳ ಉರುಳಿಸಿದ್ದರು. ಆದರೆ, ಈ ದಾಳವನ್ನು ನೋಡಿ ಸ್ವತಃ ಹೈಕಮಾಂಡ್ ನಾಯಕರಿಗೇ ಹೊಸ ತಲೆನೋವು ಶುರುವಾಗುವ ಮಟ್ಟಿಗೆ ಆತಂಕ ಎದುರಾಗಿತ್ತು.
ಸಿದ್ದರಾಮಯ್ಯ ಇಟ್ಟ ‘ಮಹಾ ಬೇಡಿಕೆ’ ಏನು?
ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾದ ಸಿದ್ದರಾಮಯ್ಯ, ರಾಜ್ಯದಲ್ಲಿ ‘ಸರ್ಕಾರದ ಸಲಹಾ ಸಮಿತಿ’ ಎಂಬ ಹೊಸ ಹುದ್ದೆಯನ್ನು ಸೃಷ್ಟಿಸಬೇಕು ಎಂದು ಪ್ರಬಲ ಬೇಡಿಕೆ ಇಟ್ಟಿದ್ದರು.
ತಮ್ಮ ಈ ಪ್ರಸ್ತಾಪಕ್ಕೆ ಅವರು ಹೈಕಮಾಂಡ್ ಮುಂದೆ ನೀಡಿದ ಕಾರಣಗಳು ಹೀಗಿವೆ:
-
“ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದ ಹೊಸ ಸಂಪುಟದಲ್ಲಿ ಹಲವು ಹಿರಿಯ ಸಚಿವರು ಇರುತ್ತಾರೆ. ಆದರೆ, ಡಿಕೆಶಿ ಮತ್ತು ಆ ಹಿರಿಯ ನಾಯಕರ ನಡುವೆ ‘ವೇವ್ಲೆಂತ್’ (Wavelength) ಸರಿ ಹೊಂದುವುದು ಕಷ್ಟ.”
-
“ಅವರ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಸೃಷ್ಟಿಯಾಗಬಹುದು. ಇದು ನೇರವಾಗಿ ಸರ್ಕಾರದ ಆಡಳಿತದ ಮೇಲೆಯೇ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ.”
-
“ಹೀಗಾಗಿ, ರಾಜ್ಯ ಸರ್ಕಾರದ ಸಲಹಾ ಸಮಿತಿಯೊಂದನ್ನು ರಚನೆ ಮಾಡಿ, ಅದಕ್ಕೆ ನಾನೇ ಅಧ್ಯಕ್ಷನಾಗುತ್ತೇನೆ. ಆ ಮೂಲಕ ಸರ್ಕಾರವನ್ನು ಯಾವುದೇ ಗೊಂದಲವಿಲ್ಲದೆ ಸರಿದೂಗಿಸಿಕೊಂಡು ಹೋಗುತ್ತೇನೆ.”
ಸಿದ್ದರಾಮಯ್ಯ ಅವರ ಈ ದಿಢೀರ್ ಪ್ರಸ್ತಾಪ ಕೇಳಿ ಒಂದು ಕ್ಷಣ ಆಶ್ಚರ್ಯಚಕಿತರಾದ ಹೈಕಮಾಂಡ್ ನಾಯಕರು, ತಕ್ಷಣವೇ ಯಾವುದೇ ನಿರ್ಧಾರ ಪ್ರಕಟಿಸದೆ “ನೋಡೋಣ ಬನ್ನಿ…” ಎಂದು ಹೇಳಿ ಸದ್ಯಕ್ಕೆ ಪರಿಸ್ಥಿತಿಯನ್ನು ನಿಭಾಯಿಸಿದ್ದರು.
ಪ್ಲ್ಯಾನ್ಗೆ ಬ್ರೇಕ್ ಹಾಕಿದ ಡಿಕೆಶಿ; ಹೈಕಮಾಂಡ್ ನಡೆ ಏನು?
ಸಿದ್ದರಾಮಯ್ಯ ಅವರ ಈ ‘ಪವರ್ ಗೇಮ್’ ತಂತ್ರ ಶುಕ್ರವಾರದ ವೇಳೆಗೆ ಡಿಕೆಶಿ ಕ್ಯಾಂಪ್ ತಲುಪಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ತೀವ್ರ ತಕರಾರು ತೆಗೆದ ಡಿ.ಕೆ. ಶಿವಕುಮಾರ್, ಹೈಕಮಾಂಡ್ ಮುಂದೆ ತಮ್ಮ ಕಡಕ್ ನಿಲುವನ್ನು ಸ್ಪಷ್ಟಪಡಿಸಿದರು.
“ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸರ್ಕಾರದ ಸಲಹಾ ಸಮಿತಿ ರಚನೆ ಮಾಡುವುದು ಬೇಡ. ಒಂದು ವೇಳೆ ಇಂತಹ ಸಮಿತಿ ರಚನೆಯಾಗಿ, ಅದಕ್ಕೆ ಸಿದ್ದರಾಮಯ್ಯ ಅಧ್ಯಕ್ಷರಾದರೆ ಅದು ಸರ್ಕಾರದಲ್ಲಿ ಮತ್ತೊಂದು ‘ಪರ್ಯಾಯ ಪವರ್ ಸೆಂಟರ್’ (Super CM) ಸೃಷ್ಟಿಸಿದಂತೆ ಆಗುತ್ತದೆ. ಮುಖ್ಯಮಂತ್ರಿಯಾಗಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಇದು ಅಡ್ಡಿಯಾಗುತ್ತದೆ. ನಾನು ಇದಕ್ಕೆ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ,” ಎಂದು ಡಿಕೆಶಿ ಹೈಕಮಾಂಡ್ಗೆ ಖಡಾಖಡಿಯಾಗಿ ತಿಳಿಸಿದರು ಎನ್ನಲಾಗಿದೆ.
ಡಿ.ಕೆ. ಶಿವಕುಮಾರ್ ಅವರ ಈ ವಾದದಲ್ಲೂ ತರ್ಕವಿದೆ ಎಂದು ಭಾವಿಸಿದ ಕಾಂಗ್ರೆಸ್ ಹೈಕಮಾಂಡ್, ಸದ್ಯಕ್ಕೆ ಅವರ ಮಾತಿಗೆ ಸಮ್ಮತಿ ಸೂಚಿಸಿದೆ. ತದನಂತರ ಸಿದ್ದರಾಮಯ್ಯ ಅವರಿಗೆ, “ಈಗ ಹಠಾತ್ತನೆ ಇಂತಹ ಸಮಿತಿ ರಚನೆ ಕಷ್ಟ, ಅಗತ್ಯ ಬಿದ್ದರೆ ಇದರ ಬಗ್ಗೆ ಮುಂದೆ ಆಲೋಚಿಸೋಣ ಬಿಡಿ” ಎಂದು ಹೇಳಿ ಮೃದುವಾಗಿಯೇ ಅವರ ಪ್ಲ್ಯಾನ್ಗೆ ಬ್ರೇಕ್ ಹಾಕಿ ವಾಪಸ್ ಕಳುಹಿಸಿದೆ.
ಒಟ್ಟಿನಲ್ಲಿ, ಸಿಎಂ ಸ್ಥಾನದಿಂದ ಕೆಳಗಿಳಿದರೂ ಆಡಳಿತದ ಮೇಲಿನ ಹಿಡಿತವನ್ನು ಬಿಟ್ಟುಕೊಡಬಾರದು ಎಂಬ ಸಿದ್ದರಾಮಯ್ಯ ಅವರ ರಾಜಕೀಯ ತಂತ್ರಕ್ಕೆ ಸದ್ಯಕ್ಕೆ ಹೈಕಮಾಂಡ್ ಮತ್ತು ಡಿಕೆಶಿ ಜಂಟಿಯಾಗಿ ತಣ್ಣೀರೆರಚಿದ್ದಾರೆ. ಮುಂದಿನ ದಿನಗಳಲ್ಲಿ ಈ ‘ಪವರ್ ವಾರ್’ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
BREAKING: ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ: ಕಂಟೇನರ್ ಹಾಗೂ ಆಟೋ ನಡುವೆ ಡಿಕ್ಕಿ, ಆರು ಕೂಲಿ ಕಾರ್ಮಿಕರ ದುರ್ಮರಣ!








