ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಮತ್ತೊಮ್ಮೆ ತೀವ್ರ ಸ್ವರೂಪದ ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಶಂಕೆಯ ಮೇರೆಗೆ ಮಂಗಳವಾರ ರಾಜ್ಯಾದ್ಯಂತ ಒಟ್ಟು 8 ಮಂದಿ ಸರ್ಕಾರಿ ಅಧಿಕಾರಿಗಳಿಗೆ ಸೇರಿದ 35ಕ್ಕೂ ಹೆಚ್ಚು ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದ್ದು, ಬರೋಬ್ಬರಿ 31.11 ಕೋಟಿ ರೂಪಾಯಿ ಮೌಲ್ಯದ ಅಸಮತೋಲನ ಆಸ್ತಿಯನ್ನು ಪತ್ತೆ ಹಚ್ಚಲಾಗಿದೆ. ಈ ಕುರಿತು ಲೋಕಾಯುಕ್ತ ಉನ್ನತ ಅಧಿಕಾರಿಗಳು ಅಧಿಕೃತ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.
ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ನಗರ-2, ಬೆಂಗಳೂರು ಗ್ರಾಮಾಂತರ-1, ದಾವಣಗೆರೆ-3, ಕಲಬುರಗಿ-1 ಮತ್ತು ಚಿಕ್ಕಮಗಳೂರು ಲೋಕಾಯುಕ್ತ ಠಾಣಾ ವ್ಯಾಪ್ತಿಯಲ್ಲಿ ಈ ಬೃಹತ್ ಕಾರ್ಯಾಚರಣೆ ನಡೆದಿದೆ. ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಕಾನೂನುಬದ್ಧ ಆದಾಯದ ಮೂಲಗಳಿಗಿಂತ ಹೆಚ್ಚಿನ ಪ್ರಮಾಣದ ಆಸ್ತಿ ಪಾಸ್ತಿಗಳನ್ನು ಸಂಪಾದಿಸಿರುವ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತದಲ್ಲಿ ಒಟ್ಟು 8 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಅಧಿಕಾರಿಗಳು ಈ ದಾಳಿಯನ್ನು ಸಂಘಟಿಸಿದ್ದರು.
ದಾಳಿಗೆ ಒಳಗಾದ ಅಧಿಕಾರಿಗಳ ಪೈಕಿ ಬೆಂಗಳೂರಿನ ಕಾವೇರಿ ಭವನದಲ್ಲಿರುವ ಕರ್ನಾಟಕ ಗೃಹ ಮಂಡಳಿಯ ನಗರ ಯೋಜನೆ ವಿಭಾಗದ ಹೆಚ್ಚುವರಿ ನಿರ್ದೇಶಕರಾದ ರಾಜಣ್ಣ ಎಸ್. ಎಲ್. ಅವರ 5 ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಗರಿಷ್ಠ ಅಂದರೆ 7.10 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಇನ್ನುಳಿದಂತೆ ಕಲಬುರಗಿ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರರಾದ ಮಾಣಿಕ್ ಎಸ್. ಕನಕಟ್ಟೆ ಅವರಿಗೆ ಸೇರಿದ 5 ಸ್ಥಳಗಳ ಮೇಲೆ ದಾಳಿ ನಡೆಸಿ 4.94 ಕೋಟಿ ರೂ. ಹಾಗೂ ಯಲಹಂಕ ಬೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಉದಯ ಕುಮಾರ್. ಎಂ. ಬಿ ಅವರ 4 ಸ್ಥಳಗಳಿಂದ 3.90 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.
ಅರಣ್ಯ ಇಲಾಖೆ ಹಾಗೂ ಸಾರಿಗೆ ಸಂಸ್ಥೆಯ ಅಧಿಕಾರಿಗಳೂ ಕೂಡ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಚಿಕ್ಕಮಗಳೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ. ಎಸ್. ಮೋಹನ್ ಅವರ 5 ಸ್ಥಳಗಳ ಮೇಲೆ ದಾಳಿ ನಡೆಸಿ 3.62 ಕೋಟಿ ರೂ. ಪತ್ತೆ ಮಾಡಿದ್ದರೆ, ದಾವಣಗೆರೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ ಪಿ. ಎನ್ ಅವರ 4 ನಿವಾಸಗಳ ಮೇಲೆ ದಾಳಿ ನಡೆಸಿ 2.70 ಕೋಟಿ ರೂ. ಆಸ್ತಿಯನ್ನು ಪತ್ತೆ ಹಚ್ಚಲಾಗಿದೆ. ಇದರೊಂದಿಗೆ ಹುಬ್ಬಳ್ಳಿಯ ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ಮುಖ್ಯ ತಾಂತ್ರಿಕ ಅಭಿಯಂತರರಾದ ಸಿದ್ದೇಶ್ವರ ಎನ್. ಹೆಬ್ಬಾಳ ಅವರಿಗೆ ಸೇರಿದ 3 ಸ್ಥಳಗಳಿಂದ 2.61 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಇದಲ್ಲದೆ, ಚಿತ್ರದುರ್ಗದ ಬಯಲುಸೀಮೆ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಕೃಷ್ಣ ನಾಯಕ್, ಎಲ್. ಎ ಅವರ 4 ನೆಲೆಗಳ ಮೇಲೆ ದಾಳಿ ನಡೆಸಿ 2.57 ಕೋಟಿ ರೂ. ಅಕ್ರಮ ಆಸ್ತಿಯನ್ನು ಪತ್ತೆ ಮಾಡಲಾಗಿದೆ. ಬೆಳಗಾವಿಯ ಕೆ.ಆರ್.ಡಿ.ಎಲ್ ಅಧೀಕ್ಷಕ ಅಭಿಯಂತರರಾದ ಸಣ್ಣ ಕೆಂಚಪ್ಪ ಅವರ 5 ಸ್ಥಳಗಳ ಮೇಲೆ ದಾಳಿ ನಡೆಸಿ 2.54 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.
ಮಂಗಳವಾರ ಮುಂಜಾನೆಯಿಂದಲೇ ಆರಂಭವಾದ ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸರು ನಗದು, ಚಿನ್ನಾಭರಣ, ಐಷಾರಾಮಿ ವಾಹನಗಳು ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಸೈಟು ಮತ್ತು ಮನೆಗಳ ಆಸ್ತಿ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಪತ್ತೆಯಾಗಿರುವ ಆಸ್ತಿಗಳ ನಿಖರ ಮೌಲ್ಯಮಾಪನ ಪ್ರಕ್ರಿಯೆ ಮುಂದುವರಿದಿದ್ದು, ಆರೋಪಿ ಅಧಿಕಾರಿಗಳ ಬ್ಯಾಂಕ್ ಲಾಕರ್‌ಗಳು ಹಾಗೂ ಹೂಡಿಕೆಗಳ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ.








