ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಅಂತಿಮ ಹಂತಕ್ಕೆ ತಲುಪಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷದ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಭರ್ಜರಿ ಜಯ ಸಾಧಿಸಿದ್ದಾರೆ. ವಿರೋಧ ಪಕ್ಷಗಳ ಪಾಳಯದಲ್ಲಿ ಭಾರಿ ಮಟ್ಟದ ಅಡ್ಡ ಮತದಾನ (Cross Voting) ನಡೆದಿರುವುದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ.
ಬಿಜೆಪಿ-ಜೆಡಿಎಸ್ ಅಡ್ಡ ಮತದಾನದ ಬಲ: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಮೂವರು ಮತ್ತು ಜೆಡಿಎಸ್ ಪಕ್ಷದ ಮೂವರು ಶಾಸಕರು ಕ್ರಾಸ್ ವೋಟಿಂಗ್ ಮಾಡಿದ್ದಾರೆ ಎನ್ನಲಾಗಿದ್ದು, ಈ ಅಡ್ಡ ಮತದಾನದ ನಡುವೆಯೂ ಕಾಂಗ್ರೆಸ್ನ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಅತಿ ಹೆಚ್ಚು ಮತಗಳನ್ನು ಪಡೆದು ಬೀಗಿದ್ದಾರೆ.
ಮತಗಳ ವಿವರ:
-
ವಿನಯ್ ಕಾರ್ತಿಕ್ (ಕಾಂಗ್ರೆಸ್): 32 ಮತಗಳು
-
ಗೋವಿಂದರಾಜು (ಜೆಡಿಎಸ್): 14 ಮತಗಳು
ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಕೇವಲ 14 ಮತಗಳನ್ನು ಪಡೆಯಲಷ್ಟೇ ಶಕ್ತರಾಗಿದ್ದು, ಭಾರಿ ಮುಖಭಂಗ ಅನುಭವಿಸಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ನ ವಿನಯ್ ಕಾರ್ತಿಕ್ ಬರೋಬ್ಬರಿ 32 ಮತಗಳನ್ನು ಬಾಚಿಕೊಳ್ಳುವ ಮೂಲಕ ಪ್ರಚಂಡ ಬಹುಮತದೊಂದಿಗೆ ಗೆಲುವಿನ ನಗೆ ಬೀರಿದ್ದಾರೆ.
ಕಾಂಗ್ರೆಸ್ ಪಾಳಯದಲ್ಲಿ ಸದ್ಯ ವಿಜಯೋತ್ಸವದ ವಾತಾವರಣ ನಿರ್ಮಾಣವಾಗಿದ್ದು, ಚುನಾವಣಾಧಿಕಾರಿಗಳಿಂದ ಅಧಿಕೃತ ಘೋಷಣೆಯೊಂದೇ ಈಗ ಬಾಕಿ ಉಳಿದಿದೆ. ವಿಪಕ್ಷಗಳ ಮೈತ್ರಿಕೂಟದ ಮತಗಳು ಸಾರಾಸಗಟಾಗಿ ಕಾಂಗ್ರೆಸ್ ಕೈ ಹಿಡಿದಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.








