ಬ್ರಿಟನ್ (UK) ನಿರ್ಧಾರ ಕೈಗೊಂಡ ಬೆನ್ನಲ್ಲೇ, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಕೂಡ ಗುರುವಾರದಂದು 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳನ್ನು (Social Media) ನಿಷೇಧಿಸುವುದಾಗಿ ಘೋಷಿಸಿದೆ. ಈ ಮೂಲಕ ಈ ರೀತಿಯ ಕಠಿಣ ಕ್ರಮ ಕೈಗೊಂಡ ಅರಬ್ ಜಗತ್ತಿನ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆಸ್ಟ್ರೇಲಿಯಾ, ಕೆನಡಾ, ಇಂಡೋನೇಷ್ಯಾ, ಮಲೇಷ್ಯಾ, ಟರ್ಕಿ ಮತ್ತು ಹಲವಾರು ಯುರೋಪಿಯನ್ ದೇಶಗಳ ಸಾಲಿಗೆ ಈಗ ಯುಎಇ ಕೂಡ ಸೇರ್ಪಡೆಯಾಗಿದ್ದು, ಹದಿಹರೆಯದವರ ಸಾಮಾಜಿಕ ಮಾಧ್ಯಮ ಬಳಕೆಯ ವಿರುದ್ಧ ಜಾಗತಿಕವಾಗಿ ಕಠಿಣ ಕ್ರಮಗಳು ಜರುಗುತ್ತಿವೆ.
ಯುಎಇ ಸಂಪುಟದ ನಿರ್ಣಯದ ಪ್ರಕಾರ, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಕಡ್ಡಾಯವಾಗಿ ಕಣ್ಗಾವಲು ಇಡಬೇಕಾಗುತ್ತದೆ ಮತ್ತು 15 ವರ್ಷದೊಳಗಿನವರು ಸೃಷ್ಟಿಸಿರುವ ಖಾತೆಗಳನ್ನು ನಿಷ್ಕ್ರಿಯಗೊಳಿಸಬೇಕಾಗುತ್ತದೆ. ಇಲ್ಲದಿದ್ದರೆ ಆ ಪ್ಲಾಟ್‌ಫಾರ್ಮ್‌ಗಳನ್ನೇ ನಿರ್ಬಂಧಿಸುವ (ಬ್ಲಾಕ್) ಎಚ್ಚರಿಕೆ ನೀಡಲಾಗಿದ್ದು, ನಿಯಮಾವಳಿಗಳನ್ನು ಜಾರಿಗೆ ತರಲು ಕಂಪನಿಗಳಿಗೆ 12 ತಿಂಗಳ ಕಾಲಾವಕಾಶ ನೀಡಲಾಗಿದೆ. “ಈ ನಿರ್ಣಯವು ಸಾಮಾಜಿಕ ಮಾಧ್ಯಮ ಬಳಕೆಗೆ ಕನಿಷ್ಠ ವಯಸ್ಸನ್ನು 15 ವರ್ಷ ಎಂದು ನಿಗದಿಪಡಿಸಿದೆ” ಎಂದು ಅಧಿಕೃತ ಸುದ್ದಿ ಸಂಸ್ಥೆ ‘WAM’ ಸಂಪುಟದ ನಿರ್ಧಾರವನ್ನು ಉಲ್ಲೇಖಿಸಿ ವರದಿ ಮಾಡಿದೆ. “ಈ ವಯಸ್ಸಿಗಿಂತ ಕೆಳಗಿನ ಮಕ್ಕಳು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈಯಕ್ತಿಕ ಖಾತೆಗಳನ್ನು ರಚಿಸುವುದು, ಬಳಸುವುದು ಅಥವಾ ನಿರ್ವಹಿಸುವುದನ್ನು ನಿಷೇಧಿಸಲಾಗಿದೆ” ಎಂದು ಸಂಸ್ಥೆ ತಿಳಿಸಿದೆ.
ಡಿಸೆಂಬರ್ 2025 ರಲ್ಲಿ ಆಸ್ಟ್ರೇಲಿಯಾ ದೇಶವು 16 ವರ್ಷದೊಳಗಿನ ಮಕ್ಕಳಿಗೆ ವಿಶ್ವದಲ್ಲೇ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮ ನಿಷೇಧವನ್ನು ಜಾರಿಗೆ ತಂದ ನಂತರ, ಇತರ ದೇಶಗಳು ಸಹ ಇದೇ ಹಾದಿಯನ್ನು ಹಿಡಿದಿವೆ. ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಮಾನಸಿಕ ಆರೋಗ್ಯದ ಸಮಸ್ಯೆಗಳು, ಸೈಬರ್ ಬೆದರಿಕೆ (cyber-bullying), ದೈಹಿಕ ಚಟುವಟಿಕೆಗಳ ಕೊರತೆ, ಆನ್‌ಲೈನ್ ಬೇಟೆಗಾರರು (online predators) ಮತ್ತು ವ್ಯಸನಕಾರಿ ನಡವಳಿಕೆಯ ಬಗ್ಗೆ ವ್ಯಕ್ತವಾದ ಆತಂಕಗಳಿಂದ ಪ್ರೇರಿತರಾಗಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ವಿಮರ್ಶಕರು, ಇಂತಹ ನಿರ್ಬಂಧಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಕಷ್ಟ ಮತ್ತು ಇದು ಮಕ್ಕಳ ಸಾಮಾಜಿಕ ಸಂವಹನದ ಅವಕಾಶಗಳನ್ನು ಸೀಮಿತಗೊಳಿಸಬಹುದು ಹಾಗೂ ಆನ್‌ಲೈನ್ ಚಟುವಟಿಕೆಗಳನ್ನು ಕಣ್ಗಾವಲು ನಡೆಸಲು ಕಷ್ಟಸಾಧ್ಯವಾದ ಗುಪ್ತ ಡಿಜಿಟಲ್ ಜಾಗಗಳಿಗೆ ತಳ್ಳಬಹುದು ಎಂದು ವಾದಿಸುತ್ತಾರೆ.
ಯುಎಇ ಸರ್ಕಾರದ ಈ ನಿರ್ಧಾರವು ಮಕ್ಕಳ ಆನ್‌ಲೈನ್ ಸುರಕ್ಷತೆಯನ್ನು ಬಲಪಡಿಸುವ ಜಾಗತಿಕ ಪ್ರಯತ್ನಗಳಿಗೆ ಪೂರಕವಾಗಿದೆ. ಹೊಸ ನಿಯಮಗಳ ಪ್ರಕಾರ, ಮಕ್ಕಳು ಸಾಮಾಜಿಕ ಮಾಧ್ಯಮದ ಯಾವುದೇ ಪ್ರಮುಖ ವೈಶಿಷ್ಟ್ಯಗಳನ್ನು ಬಳಸುವಂತಿಲ್ಲ. ಅಂದರೆ, ಇತರರೊಂದಿಗೆ ಸಂವಹನ ನಡೆಸುವುದು, ಪೋಸ್ಟ್‌ಗಳನ್ನು ಹಾಕುವುದು, ಕಾಮೆಂಟ್ ಮಾಡುವುದು, ಲಿಂಕ್‌ಗಳನ್ನು ಹಂಚಿಕೊಳ್ಳುವುದು, ಸಾರ್ವಜನಿಕ ಗುಂಪುಗಳನ್ನು ಸೇರುವುದು, ಓಪನ್ ಚಾನೆಲ್‌ಗಳಲ್ಲಿ ಭಾಗವಹಿಸುವುದು ಅಥವಾ ದೊಡ್ಡ ಪ್ರಮಾಣದ ಸಂವಾದಾತ್ಮಕ ಸಮುದಾಯಗಳಲ್ಲಿ ತೊಡಗಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಆದಾಗ್ಯೂ, 15 ಮತ್ತು 16 ವರ್ಷದ ಹದಿಹರೆಯದವರು ಸಾಮಾಜಿಕ ಮಾಧ್ಯಮವನ್ನು ಬಳಸಬಹುದು. ಆದರೆ ಕಂಟೆಂಟ್ ನಿಯಂತ್ರಣಗಳು ಮತ್ತು ಸ್ಕ್ರೀನ್ ಟೈಮ್ (ಮೊಬೈಲ್ ನೋಡುವ ಸಮಯ) ಮಿತಿಗಳಂತಹ ಕಟ್ಟುನಿಟ್ಟಾದ ಸುರಕ್ಷತಾ ಕ್ರಮಗಳ ಅಡಿಯಲ್ಲಿ ಮಾತ್ರ ಅವರಿಗೆ ಅವಕಾಶವಿರುತ್ತದೆ. ಈ ನಿಯಮಗಳನ್ನು ಪಾಲಿಸಲು ವಿಫಲವಾಗುವ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಜಾರಿ ಕ್ರಮಗಳನ್ನು ತೆಗೆದುಕೊಳ್ಳಲು ಮಾಧ್ಯಮ ಮತ್ತು ದೂರಸಂಪರ್ಕವನ್ನು ಮೇಲ್ವಿಚಾರಣೆ ಮಾಡುವ ನಿಯಂತ್ರಕ ಸಂಸ್ಥೆಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ.
Subscribe to Updates
Get the latest creative news from FooBar about art, design and business.
Big News: ಬ್ರಿಟನ್ ನಂತರ 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಿದ UAE
By ಗೋಪಾಲ್ ಎನ್








