ಮಂಡ್ಯ : ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಭೀಮನಹಳ್ಳಿಯಲ್ಲಿ ಇತ್ತೀಚೆಗೆ ನಡೆದಿದ್ದ ಮಹೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗೆ ಪೊಲೀಸರು ಹಾಡುಹಗಲೇ ಗುಂಡು ಹಾರಿಸಿ ಬಂಧಿಸಿರುವ ರೋಮಾಂಚನಕಾರಿ ಘಟನೆ ನಡೆದಿದೆ. ಸ್ಥಳ ಮಹಜರು ನಡೆಸುವ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಆತ್ಮರಕ್ಷಣೆಗಾಗಿ ಈ ಕ್ರಮ ಕೈಗೊಂಡಿದ್ದಾರೆ.
ಹಲಗೂರು ಸಮೀಪದ ಹುಲ್ಲೇಗಾಲದ ಬಳಿ ಈ ಫೈರಿಂಗ್ ನಡೆದಿದ್ದು, ಆರೋಪಿ ಸಿದ್ದರಾಜು ಅಲಿಯಾಸ್ ‘ಸೀಜರ್ ಸಿದ್ದು’ ಕಾಲಿಗೆ ಗುಂಡೇಟು ಬಿದ್ದಿದೆ.
ಘಟನೆಯ ವಿವರ: ಮೊನ್ನೆಯಷ್ಟೇ ಭೀಮನಹಳ್ಳಿಯಲ್ಲಿ ಮಹೇಶ್ ಎಂಬ ವ್ಯಕ್ತಿಯ ಭೀಕರ ಕೊಲೆಯಾಗಿತ್ತು. ಮೊಬೈಲ್ ಮೆಸೇಜ್ ಕಳುಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ವಾಹನಗಳ ಸೀಜಿಂಗ್ ಕೆಲಸ ಮಾಡುತ್ತಿದ್ದ ಸಿದ್ದರಾಜು, ಮಹೇಶ್‌ನನ್ನು ಹತ್ಯೆ ಮಾಡಿದ್ದ ಎನ್ನಲಾಗಿದೆ. ಈ ಪ್ರಕರಣದ ಎ೧ (A1) ಆರೋಪಿಯಾಗಿದ್ದ ಸಿದ್ದರಾಜುನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಇಂದು ಹುಲ್ಲೇಗಾಲದ ಬಳಿ ಆರೋಪಿಯನ್ನು ಮಹಜರು ಪ್ರಕ್ರಿಯೆಗಾಗಿ ಸ್ಥಳಕ್ಕೆ ಕರೆತರಲಾಗಿತ್ತು. ಈ ವೇಳೆ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಳ್ಳಲು ಪ್ಲಾನ್ ಮಾಡಿದ ಆರೋಪಿ ಸಿದ್ದು, ಅಲ್ಲಿನ ಪೊಲೀಸ್ ಸಿಬ್ಬಂದಿ ಮೇಲೆ ದಿಢೀರ್ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ.
ಆತ್ಮರಕ್ಷಣೆಗಾಗಿ ಹಾರಿದ ಗುಂಡು: ಆರೋಪಿ ಸಿದ್ದರಾಜು ಪೊಲೀಸರ ಮೇಲೆಯೇ ತಿರುಗಿಬಿದ್ದು ಓಡಿಹೋಗಲು ಯತ್ನಿಸಿದ ತಕ್ಷಣ, ಕಿರುಗಾವಲು ಸಿಪಿಐ ಶ್ರೀಧರ್ ಸಮ್ಮುಖದಲ್ಲಿ ಪಿಎಸ್‌ಐ ರವಿಕುಮಾರ್ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟು ತಿಂದು ಬಿದ್ದ ಆರೋಪಿಯನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಗಾಯಾಳು ಆರೋಪಿ ಸಿದ್ದರಾಜುಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಎಸ್‌ಪಿ ಭೇಟಿ: ಫೈರಿಂಗ್ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ವಿ.ಜೆ. ಶೋಭಾರಾಣಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್‌ಪಿ, “ಸ್ಥಳ ಮಹಜರು ಪ್ರಕ್ರಿಯೆ ನಡೆಯುತ್ತಿದ್ದಾಗ ಆರೋಪಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಓಡಿಹೋಗಲು ಪ್ರಯತ್ನಿಸಿದ್ದಾನೆ. ಈ ವೇಳೆ ಸಿಬ್ಬಂದಿಯ ಆತ್ಮರಕ್ಷಣೆಗಾಗಿ ಆತನ ಮೇಲೆ ಗುಂಡು ಹಾರಿಸಿ ಬಂಧಿಸಲಾಗಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.








