ಮಾಸ್ಕೋ / ಕೀವ್:ರಷ್ಯಾದ ರಾಜಧಾನಿ ಮಾಸ್ಕೋದಲ್ಲಿರುವ ತೈಲ ಸಂಸ್ಕರಣಾಗಾರವನ್ನು (Oil Refinery) ಗುರಿಯಾಗಿಸಿಕೊಂಡು ಉಕ್ರೇನ್ ಈ ವಾರದಲ್ಲಿ ಎರಡನೇ ಬಾರಿಗೆ ಭೀಕರ ದಾಳಿ ನಡೆಸಿದ್ದು, ಗುರುವಾರ ಮಾಸ್ಕೋದ ಆಕಾಶದಲ್ಲಿ ಕಪ್ಪು ಹೊಗೆ ಮತ್ತು ಬೆಂಕಿಯ ಜ್ವಾಲೆಗಳು ಆವರಿಸಿವೆ.
ಈ ದಾಳಿಯ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿರುವುದರ ನಡುವೆ ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, “ಇತ್ತೀಚೆಗೆ ಕೀವ್ ನಗರದ ಮೇಲೆ ರಷ್ಯಾ ನಡೆಸಿದ ದಾಳಿಗಳಿಗೆ ಇದು ನಮ್ಮ ನ್ಯಾಯಸಮ್ಮತ ಪ್ರತಿಕ್ರಿಯೆಯಾಗಿದೆ” ಎಂದು ಹೇಳಿದ್ದಾರೆ.
ಕೀವ್ ಮೇಲಿನ ದಾಳಿಗೆ ಪ್ರತೀಕಾರ
ಇತ್ತೀಚೆಗೆ ರಷ್ಯಾ ಕೀವ್ ನಗರದ ಮೇಲೆ ನಡೆಸಿದ ವೈಮಾನಿಕ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಉಕ್ರೇನ್ ಈ ದಾಳಿಯನ್ನು ನಡೆಸಿದೆ. ಈ ವಾರದ ಆರಂಭದಲ್ಲಿ, ಯುನೆಸ್ಕೋ (UNESCO) ಪಾರಂಪರಿಕ ಪಟ್ಟಿಗೆ ಸೇರಿದ ‘ಕೀವ್-ಪೆಚೆರ್ಸ್ಕ್ ಲಾವ್ರಾ’ ಮಠದ ಸಂಕೀರ್ಣದ ಭಾಗವಾಗಿರುವ ಡೋರ್ಮಿಷನ್ ಕ್ಯಾಥೆಡ್ರಲ್ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದರು.
ಉಕ್ರೇನ್ ಅಧಿಕಾರಿಗಳ ಪ್ರಕಾರ, ರಾಜಧಾನಿ ಸೇರಿದಂತೆ ದೇಶದ ಹಲವು ನಗರಗಳ ಮೇಲೆ ರಷ್ಯಾ ನಡೆಸಿದ ಈ ದಾಳಿಯು, ಇತ್ತೀಚಿನ ತಿಂಗಳುಗಳಲ್ಲಿ ಕೀವ್‌ನ ಸಾಂಸ್ಕೃತಿಕ ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲೆ ನಡೆದ ಅತ್ಯಂತ ವಿನಾಶಕಾರಿ ವೈಮಾನಿಕ ದಾಳಿಗಳಲ್ಲಿ ಒಂದಾಗಿದೆ.
”ನಮ್ಮ ನಗರಗಳು ಮತ್ತು ಸಮುದಾಯಗಳ ಮೇಲಿನ ರಷ್ಯಾದ ದಾಳಿಗಳಿಗೆ ಇದು ಸಂಪೂರ್ಣವಾಗಿ ನ್ಯಾಯಸಮ್ಮತವಾದ ಪ್ರತಿಕ್ರಿಯೆಯಾಗಿದೆ. ರಷ್ಯಾದ ಯುದ್ಧ ಯಂತ್ರಕ್ಕೆ ಆಧಾರವಾಗಿರುವ ಸೌಲಭ್ಯಗಳ ವಿರುದ್ಧ ನಮ್ಮ ಯೋಧರು ನಡೆಸಿದ ಕಾರ್ಯಾಚರಣೆಯ ಮತ್ತೊಂದು ಪ್ರಮುಖ ಫಲಿತಾಂಶ ಇದಾಗಿದೆ,” ಎಂದು ಝೆಲೆನ್ಸ್ಕಿ ಎಕ್ಸ್ (X) ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ವಿಮಾನ ಹಾರಾಟ ಸ್ಥಗಿತ; ಬೃಹತ್ ಡ್ರೋನ್ ದಾಳಿ ತಡೆದ ರಷ್ಯಾ
ರಷ್ಯಾದ ಅಧಿಕಾರಿಗಳ ಪ್ರಕಾರ, ದೇಶದ ವಿವಿಧ ಪ್ರದೇಶಗಳ ಮೇಲೆ ದಾಳಿ ಮಾಡಲು ಬಂದಿದ್ದ ಕನಿಷ್ಠ 555 ಉಕ್ರೇನಿಯನ್ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಮತ್ತು ಮಾಸ್ಕೋ ನಗರವನ್ನು ಸಮೀಪಿಸುತ್ತಿದ್ದ ಸುಮಾರು 200 ಡ್ರೋನ್‌ಗಳನ್ನು ತಡೆಯಲಾಗಿದೆ.
ಇದಲ್ಲದೆ, ಈ ಭದ್ರತಾ ಆತಂಕದ ಹಿನ್ನೆಲೆಯಲ್ಲಿ ಮಾಸ್ಕೋದ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಾದ ಶ್ಶೆರೆಮೆಟ್ಯೆವೊ, ಡೊಮೊಡೆಡೋವೊ, ವ್ನುಕೊವೊ ಮತ್ತು ಝುಕೋವ್ಸ್ಕಿಗಳಿಂದ ಎಲ್ಲಾ ವಿಮಾನಗಳ ಹಾರಾಟವನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ರಷ್ಯಾದ ಸಾರಿಗೆ ಸಚಿವಾಲಯ ಪ್ರಕಟಿಸಿದೆ.








