ಬೆಂಗಳೂರು: ಜೂನ್ ತಿಂಗಳು ಮುಗಿಯುತ್ತಾ ಬಂದರೂ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯದ ಕಾರಣ ಕರ್ನಾಟಕದ ಹಲವೆಡೆ ತೀವ್ರ ಬರದ ಆತಂಕ ಎದುರಾಗಿದೆ. ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲೇ ಮಳೆರಾಯ ಮುನಿಸಿಕೊಂಡಿದ್ದು, ಜೀವನದಿಗಳ ಒಡಲು ಬತ್ತಿ ಹೋಗುತ್ತಿವೆ. ಜೂನ್ ಮೊದಲ ವಾರದಲ್ಲಿ ಅಬ್ಬರಿಸಿದ್ದ ಮಳೆರಾಯ ಅಷ್ಟೇ ವೇಗದಲ್ಲಿ ಮಾಯವಾಗಿದ್ದು, ಬೆಳೆಗಳು ಒಣಗುವ ಹಂತ ತಲುಪಿವೆ.
ಕೋಟಿ ಕೋಟಿ ಜನರಿಗೆ ನೀರುಣಿಸುವ ಕರುನಾಡಿನ ಜೀವನದಿ ಕಾವೇರಿಯ ಉಗಮಸ್ಥಾನವಾದ ಕೊಡಗಿನಲ್ಲೇ ಮುಂಗಾರು ಕೈಕೊಟ್ಟಿದೆ. ಪ್ರತಿವರ್ಷ ಈ ಅವಧಿಗೆ ಮೈದುಂಬಿ ಹರಿಯುತ್ತಿದ್ದ ಕಾವೇರಿ ನದಿಯಲ್ಲಿ ಈಗ ಕಲ್ಲುಗಳು ಮಾತ್ರ ಕಾಣಿಸುತ್ತಿದ್ದು, ಕೇವಲ ಅರ್ಧದಿಂದ ಒಂದು ಅಡಿಯಷ್ಟು ಮಾತ್ರ ನೀರು ಹರಿಯುತ್ತಿದೆ.
ಹವಮಾನ ವರದಿಯ ಪ್ರಕಾರ ಕೊಡಗಿನಲ್ಲಿ ಈ ಬಾರಿ ಶೇಕಡಾ 70 ರಷ್ಟು ಮಳೆ ಕೊರತೆಯಾಗುವ ಸಾಧ್ಯತೆ ಇದ್ದು, ಇದು ಮುಂಬರುವ ದಿನಗಳಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಮತ್ತೆ ಕಾವೇರಿ ನೀರಿನ ವಿವಾದಕ್ಕೆ ಕಾರಣವಾಗುವ ಆತಂಕ ಮೂಡಿಸಿದೆ.
ಜೂನ್ ಮೊದಲ ವಾರದಲ್ಲಿ ಬಿದ್ದ ಮಳೆಗೆ ರೈತರು ಸಂತಸದಿಂದ ಶೇಕಡಾ 50 ರಷ್ಟು ಬಿತ್ತನೆ ಕಾರ್ಯ ಮುಗಿಸಿದ್ದರು. ಹೆಸರು, ಶೇಂಗಾ, ಮೆಕ್ಕೆಜೋಳ ಬಿತ್ತನೆ ಮಾಡಿದ್ದ ರೈತರಿಗೆ ಈಗ ತೀವ್ರ ನಿರಾಶೆಯಾಗಿದೆ. ಕಳೆದ ಹಲವು ದಿನಗಳಿಂದ ಒಂದು ಹನಿ ಮಳೆಯೂ ಇಲ್ಲದೆ, ಬಿಸಿಲು ಹೆಚ್ಚಾಗಿ ಬೆಳೆಗಳು ಸಂಪೂರ್ಣ ಒಣಗುತ್ತಿವೆ. ಹೊಂಬಳ ಗ್ರಾಮದ ರೈತರು ತಮ್ಮ ಒಡವೆಗಳನ್ನು ಅಡವಿಟ್ಟು, ಸಾಲ ತಂದು ಬಿತ್ತನೆ ಮಾಡಿದ್ದು, ಈಗ ಬೆಳೆ ಕೈಗೆ ಬರದೇ ಬಡ್ಡಿ ಕಟ್ಟುವ ಚಿಂತೆಯಲ್ಲಿ ಕಂಗಾಲಾಗಿದ್ದಾರೆ.
ಬೀದರ್ ಜಿಲ್ಲೆಯ ಭಾಗದಲ್ಲಿ ಮಳೆ ಕೊರತೆಯಿಂದಾಗಿ ನೇರಳೆ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಮಣ್ಣಿನಲ್ಲಿ ತೇವಾಂಶ ಇಲ್ಲದ ಕಾರಣ ನೇರಳೆ ಹಣ್ಣಿನ ಗಾತ್ರ ತೀರಾ ಚಿಕ್ಕದಾಗಿದೆ ಹಾಗೂ ಹಣ್ಣಿನಲ್ಲಿ ಸಿಹಿ ಅಂಶ ಕೂಡ ಕಡಿಮೆಯಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಹಣ್ಣಿನ ದರ ಪಾತಾಳಕ್ಕೆ ಕುಸಿದಿದೆ.








