ನವದೆಹಲಿ: ಕಳೆದ ಕೆಲವು ತಿಂಗಳುಗಳಿಂದ ದೇಶಾದ್ಯಂತ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗ್ರಾಹಕರು ಎದುರಿಸುತ್ತಿರುವ ಬಯೋಮೆಟ್ರಿಕ್ ಆಧಾರ್ ಆಧಾರಿತ ಇ-ಕೆವೈಸಿ (e-KYC) ಪ್ರಕ್ರಿಯೆಯ ಗೊಂದಲಗಳಿಗೆ ಕೊನೆಗೂ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಇ-ಕೆವೈಸಿ ಯಾರಿಗೆ ಕಡ್ಡಾಯ ಮತ್ತು ಯಾರಿಗೆ ಅಗತ್ಯವಿಲ್ಲ ಎಂಬ ಬಗ್ಗೆ ನಾಗರಿಕರಲ್ಲಿ ಭಾರಿ ಗೊಂದಲ ಮೂಡಿತ್ತು. ಗ್ಯಾಸ್ ಏಜೆನ್ಸಿಗಳ ಮುಂದೆ ಜನರು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಈಗ ಸರ್ಕಾರ ಈ ವಿಷಯದ ಕುರಿತು ಸ್ಪಷ್ಟಪಡಿಸಿದೆ.
ಯಾರಿಗೆ ಇ-ಕೆವೈಸಿ ಕಡ್ಡಾಯ?
ಸಬ್ಸಿಡಿ ಪಡೆಯುವ ಗ್ರಾಹಕರು: ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಉಚಿತ ಅಥವಾ ಸಬ್ಸಿಡಿ ದರದಲ್ಲಿ ಗ್ಯಾಸ್ ಸಂಪರ್ಕ ಪಡೆದಿರುವ ಗ್ರಾಹಕರು ಹಾಗೂ ಸರ್ಕಾರದ ಇತರ ಸಬ್ಸಿಡಿ ಪ್ರಯೋಜನಗಳನ್ನು ಪಡೆಯುತ್ತಿರುವ ಎಲ್ಪಿಜಿ ಬಳಕೆದಾರರಿಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.
ದೀರ್ಘಕಾಲದಿಂದ ಅಪ್ ಡೇಟ್ ಆಗದ ಖಾತೆಗಳು: ನಿಮ್ಮ ಗ್ಯಾಸ್ ಕನೆಕ್ಷನ್ ಖಾತೆಗೆ ಹಲವು ವರ್ಷಗಳಿಂದ ಆಧಾರ್ ಲಿಂಕ್ ಆಗದಿದ್ದರೆ ಅಥವಾ ಬಯೋಮೆಟ್ರಿಕ್ ಮಾಹಿತಿ ಅಪ್ಡೇಟ್ ಇಲ್ಲದಿದ್ದರೆ ಅಂತಹವರು ಇದನ್ನು ಮಾಡಿಸಬೇಕಾಗುತ್ತದೆ.
ಯಾರಿಗೆ ಇ-ಕೆವೈಸಿ ಅಗತ್ಯವಿಲ್ಲ?
ಸಾಮಾನ್ಯ (ಸಬ್ಸಿಡಿ ರಹಿತ) ಗ್ರಾಹಕರು: ಮಾರುಕಟ್ಟೆ ದರದಲ್ಲಿ (ಸಬ್ಸಿಡಿ ಇಲ್ಲದೆ) ಸಿಲಿಂಡರ್ ಖರೀದಿಸುವ ಸಾಮಾನ್ಯ ಗ್ರಾಹಕರಿಗೆ ಸದ್ಯಕ್ಕೆ ಯಾವುದೇ ಬಯೋಮೆಟ್ರಿಕ್ ಇ-ಕೆವೈಸಿ ಕಡ್ಡಾಯವಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇ-ಕೆವೈಸಿ ಮಾಡಿಸುವುದು ಹೇಗೆ?
ಗ್ರಾಹಕರು ತಮ್ಮ ಹತ್ತಿರದ ಗ್ಯಾಸ್ ವಿತರಕರ (Gas Agency) ಕಚೇರಿಗೆ ಭೇಟಿ ನೀಡಿ ಬಯೋಮೆಟ್ರಿಕ್ (ಬೆರಳಚ್ಚು ಅಥವಾ ಕಣ್ಣಿನ ಸ್ಕ್ಯಾನ್) ಮೂಲಕ ಇದನ್ನು ಸುಲಭವಾಗಿ ಪೂರ್ಣಗೊಳಿಸಬಹುದು. ಇದಲ್ಲದೆ ಗ್ಯಾಸ್ ಕಂಪನಿಗಳ ಅಧಿಕೃತ ಮೊಬೈಲ್ ಆಪ್ಗಳ ಮೂಲಕವೂ ಮನೆಯಲ್ಲೇ ಕುಳಿತು ಮುಖ ಗುರುತಿಸುವಿಕೆ (Face Recognition) ತಂತ್ರಜ್ಞಾನದ ಸಹಾಯದಿಂದ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ.
ಯಾವುದೇ ವದಂತಿಗಳಿಗೆ ಕಿವಿಗೊಡದೆ, ನಿಮ್ಮ ಗ್ಯಾಸ್ ಏಜೆನ್ಸಿ ಅಥವಾ ಅಧಿಕೃತ ವೆಬ್ಸೈಟ್ ಮೂಲಕ ಸರಿಯಾದ ಮಾಹಿತಿ ಪಡೆದುಕೊಳ್ಳುವಂತೆ ಸರ್ಕಾರ ಜನರಲ್ಲಿ ಮನವಿ ಮಾಡಿದೆ.








