ಶಿವಮೊಗ್ಗ: ನಕಲಿ ಜಾತಿ ಪ್ರಮಾಣ ಪತ್ರವನ್ನು ಬಳಸಿಕೊಂಡು ಸರ್ಕಾರಿ ನೌಕರಿ ಹಾಗೂ ಮುಂಬಡ್ತಿ ಪಡೆದು, ನೈಜ ಪರಿಶಿಷ್ಟ ಜಾತಿಯ ಜನರಿಗೆ ವಂಚಿಸುತ್ತಿರುವ ಸಾಗರ ನಗರಸಭೆಯ ನೌಕರ ಮೇಸ್ತ್ರಿ ನಾಗರಾಜ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಆತನ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.), ಸಾಗರ ತಾಲ್ಲೂಕು ಶಾಖೆಯು ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರನ್ನು ಸಲ್ಲಿಸಿದೆ.
ಹಿನ್ನೆಲೆ ಮತ್ತು ಆರೋಪ:
ಸಾಗರ ಟೌನ್ನ ಎಸ್.ಎನ್. ನಗರದ ಎ.ಕೆ. ಕಾಲೋನಿ ನಿವಾಸಿಯಾದ ನಾಗರಾಜ್ ಬಿನ್ ಮಾಣಿಕ್ಯ ಎಂಬುವವರು ಸಾಗರ ನಗರಸಭೆಯಲ್ಲಿ ಪೌರನೌಕರ ಮೇಸ್ತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕೆಲಸಕ್ಕೆ ಸೇರುವ ಸಂದರ್ಭದಲ್ಲಿ ತಪ್ಪು ಮಾಹಿತಿ ನೀಡಿ ‘ಆದಿಕರ್ನಾಟಕ’ (SC) ಜನಾಂಗದ ಪ್ರಮಾಣ ಪತ್ರವನ್ನು ಪಡೆದುಕೊಂಡು ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಈ ನಕಲಿ ದಾಖಲೆಯ ಆಧಾರದ ಮೇಲೆ ಸರ್ಕಾರದಿಂದ ಸಿಗುವ ಮುಂಬಡ್ತಿ (ಪ್ರಮೋಷನ್) ಸೌಲಭ್ಯಗಳನ್ನೂ ಸಹ ಪಡೆದುಕೊಂಡಿದ್ದಾರೆ ಎಂದು ಡಿ.ಎಸ್.ಎಸ್. ತನ್ನ ದೂರಿನಲ್ಲಿ ಗಂಭೀರವಾಗಿ ಆರೋಪಿಸಿದೆ.
ತನಿಖೆಯಲ್ಲಿ ಬೆಳಕಿಗೆ ಬಂದ ಸತ್ಯ:
ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಈ ವಿಷಯದ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಿದಾಗ ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಆರೋಪಿ ನಾಗರಾಜ್ ಅವರು ಸಾಗರ ನಗರಸಭೆಯ ಮಾಜಿ ಅಧ್ಯಕ್ಷರಾದ ಗಣಾದೀಶ ಬಿನ್ ತೊಪ್ಪಲರಾಜು ಅವರ ರಕ್ತಸಂಬಂಧಿಯಾಗಿದ್ದಾರೆ. ಗಣಾದೀಶ ಅವರು ಮೂಲತಃ ‘ಅರುಂಧತಿಯರ್’ ಜಾತಿಗೆ ಸೇರಿದವರಾಗಿದ್ದು, ಅವರು ಪಡೆದಿದ್ದ ಎಸ್.ಸಿ. ಜಾತಿ ಪ್ರಮಾಣ ಪತ್ರವನ್ನು ಈಗಾಗಲೇ ಶಿವಮೊಗ್ಗ ಜಿಲ್ಲಾ ಜಾತಿ ಆದಾಯ ಪರಿಶೀಲನಾ ಸಮಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಪರಿಶೀಲಿಸಿ, ಅಂತಿಮ ಆದೇಶದ ಮೂಲಕ ರದ್ದುಗೊಳಿಸಿದ್ದಾರೆ.
ಮಾಜಿ ಅಧ್ಯಕ್ಷ ಗಣಾದೀಶ ಅವರ ಜಾತಿ ಪ್ರಮಾಣ ಪತ್ರವೇ ರದ್ದಾಗಿರುವುದರಿಂದ, ಅವರ ರಕ್ತಸಂಬಂಧಿಯಾದ ನಾಗರಾಜ್ ಕೂಡ ನಕಲಿ ಎಸ್ಸಿ ಜಾತಿ ಪ್ರಮಾಣ ಪತ್ರದ ಮೂಲಕವೇ ಸೌಲಭ್ಯ ಪಡೆದಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಸಂಘಟನೆ ವಾದಿಸಿದೆ.
ದೌರ್ಜನ್ಯ ಮತ್ತು ವಂಚನೆ:
ನಾಗರಾಜ್ ಅವರು ನಕಲಿ ಪ್ರಮಾಣ ಪತ್ರದ ಮೂಲಕ ನೈಜ ಪರಿಶಿಷ್ಟ ಜಾತಿ (SC) ವರ್ಗದವರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳನ್ನು ಕಿತ್ತುಕೊಂಡು ವಂಚಿಸುತ್ತಿದ್ದಾರೆ. ಇದಲ್ಲದೆ, ಈ ಹುದ್ದೆಯ ಬಲದಿಂದ ಸಹೋದ್ಯೋಗಿ ನೌಕರರು ಹಾಗೂ ಸಾರ್ವಜನಿಕರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಡಿ.ಎಸ್.ಎಸ್ ಸಂಘಟನೆಯ ಆಗ್ರಹ:
”ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ನೌಕರಿ ಪಡೆದಿರುವ ನಾಗರಾಜ ಬಿನ್ ಮಾಣಿಕ್ಯ ಅವರ ಜಾತಿ ಪ್ರಮಾಣ ಪತ್ರವನ್ನು ತಕ್ಷಣವೇ ರದ್ದುಪಡಿಸಬೇಕು. ಅಲ್ಲದೆ, ಆತನಿಗೆ ನಕಲಿ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ವಿರುದ್ಧ ಮತ್ತು ವಂಚನೆ ಎಸಗಿದ ನಾಗರಾಜನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.” – ಎಸ್. ಲಕ್ಷ್ಮಣ್ ಸಾಗರ್, ತಾಲ್ಲೂಕು ಸಂಚಾಲಕರು, ಡಿ.ಎಸ್.ಎಸ್, ಸಾಗರ.
ಈ ಮನವಿಯೊಂದಿಗೆ ಮಾಜಿ ಅಧ್ಯಕ್ಷ ಗಣಾಧೀಶರ ಜಾತಿ ಪ್ರಮಾಣ ಪತ್ರ ವಜಾವಾಗಿರುವ ಸಂಪೂರ್ಣ ಮಾಹಿತಿಯ ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದ್ದು, ಸೂಕ್ತ ನ್ಯಾಯ ದೊರಕಿಸಿಕೊಡುವಂತೆ ಸಮಿತಿಯ ಪ್ರಮುಖರಾದ ರವಿ ಜಂಬಗಾರು, ಧರ್ಮರಾಜ್ ಬೆಳಲಮಕ್ಕಿ, ಚಂದ್ರಪ್ಪ ಜೋಗ್, ಸಂತೋಷ್ ಬಂದಗದ್ದೆ, ಚಂದ್ರಪ್ಪ ತ್ಯಾಗರ್ತಿ, ನಾಗಪ್ಪ ಹುರುಳಿ ಹಾಗೂ ಸುರೇಶ್ ಬಿ.ಆರ್. ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…









