ಪಶ್ಚಿಮ ಏಷ್ಯಾದ ಸಂಘರ್ಷದ ನಡುವೆ ಲೆಬನಾನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳ (UN Peacekeepers) ಮೇಲೆ ನಡೆದ ಸರಣಿ ದಾಳಿಗಳನ್ನು ಭಾರತವು ಕಠಿಣ ಶಬ್ದಗಳಲ್ಲಿ ಖಂಡಿಸಿದೆ. ಶಾಂತಿ ಸ್ಥಾಪನೆಗಾಗಿ ಪ್ರಾಣತ್ಯಾಗ ಮಾಡಿದ ‘ಬ್ಲೂ ಹೆಲ್ಮೆಟ್’ (Blue Helmets) ಸೈನಿಕರಿಗೆ ಭಾರತವು ಈ ಸಂದರ್ಭದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಕಟಣೆ ಹೊರಡಿಸಿದ್ದು, “ವಿಶ್ವಸಂಸ್ಥೆಯ ಆವರಣ ಮತ್ತು ಶಾಂತಿಪಾಲಕರ ಸುರಕ್ಷತೆಯು ಅತ್ಯಂತ ಪವಿತ್ರವಾದುದು. ಅವರ ಮೇಲೆ ನಡೆಸುವ ಯಾವುದೇ ದಾಳಿಯು ಅಂತರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ಆತಂಕ ವ್ಯಕ್ತಪಡಿಸಿದೆ.
ಇತ್ತೀಚಿನ ದಿನಗಳಲ್ಲಿ ನಡೆದ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಶಾಂತಿಪಾಲಕರಿಗೆ ಭಾರತವು ಗೌರವ ಸಲ್ಲಿಸಿದೆ. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ ಅತಿ ಹೆಚ್ಚು ಸೈನಿಕರನ್ನು ಕಳುಹಿಸುವ ದೇಶಗಳಲ್ಲಿ ಭಾರತವೂ ಒಂದಾಗಿದ್ದು, ಪ್ರಸ್ತುತ ಲೆಬನಾನ್‌ನಲ್ಲಿ ಸುಮಾರು 900ಕ್ಕೂ ಹೆಚ್ಚು ಭಾರತೀಯ ಸೈನಿಕರು ನಿಯೋಜನೆಗೊಂಡಿದ್ದಾರೆ.
ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಯುದ್ಧವು ಲೆಬನಾನ್ ಗಡಿಯಲ್ಲಿ ತೀವ್ರಗೊಂಡಿದೆ. ಈ ವೇಳೆ ವಿಶ್ವಸಂಸ್ಥೆಯ ಕಾವಲು ಗೋಪುರಗಳು ಮತ್ತು ನೆಲೆಗಳ ಮೇಲೆ ಗುಂಡಿನ ದಾಳಿ ನಡೆದಿದ್ದು, ಹಲವು ಸೈನಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ಸಂಘರ್ಷದಲ್ಲಿ ತೊಡಗಿರುವ ಎಲ್ಲಾ ದೇಶಗಳು ವಿಶ್ವಸಂಸ್ಥೆಯ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಯುದ್ಧ ವಲಯದಲ್ಲಿ ಮಾನವೀಯ ನಿಯಮಗಳನ್ನು ಪಾಲಿಸಬೇಕು ಎಂದು ಭಾರತ ಒತ್ತಾಯಿಸಿದೆ.








