ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಂಡ-ಪೋಕರಿಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರ ಭದ್ರತೆಗೆ ಧಕ್ಕೆ ತರುವಂತಹ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ನಗರದ ಹೃದಯಭಾಗದಲ್ಲಿ ತಡರಾತ್ರಿ ಉಬರ್ ಚಾಲಕನೊಬ್ಬನ ಮೇಲೆ ದುಷ್ಕರ್ಮಿಗಳ ಗ್ಯಾಂಗ್ ಒಂದು ಭೀಕರವಾಗಿ ಹಲ್ಲೆ (ಡೆಡ್ಲಿ ಅಟ್ಯಾಕ್) ನಡೆಸಿದ್ದು, ಈ ಘಟನೆ ಇಡೀ ನಗರವನ್ನು ಬೆಚ್ಚಿಬೀಳಿಸಿದೆ.
ರಸ್ತೆಯಲ್ಲೇ ಎಳೆದಾಡಿ ಹಿಗ್ಗಾಮುಗ್ಗ ಥಳಿತ ನಿನ್ನೆ ರಾತ್ರಿ ಬೆಂಗಳೂರಿನ ಡಬಲ್ ರೋಡ್ (Double Road) ಜಂಕ್ಷನ್ನಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದೆ. ಉಬರ್ ಕಾರು ಚಾಲಕ ಎಂದಿನಂತೆ ತನ್ನ ಕರ್ತವ್ಯದಲ್ಲಿದ್ದಾಗ ಮಾರ್ಗಮಧ್ಯೆ ಹೊಂಚು ಹಾಕಿ ಕುಳಿತಿದ್ದ ನಾಲ್ಕೈದು ಜನರಿದ್ದ ಪುಂಡರ ಗ್ಯಾಂಗ್ ಕಾರನ್ನು ತಡೆದಿದೆ. ಅಷ್ಟಕ್ಕೇ ನಿಲ್ಲದ ದುಷ್ಕರ್ಮಿಗಳು, ಕಾರಿನ ಒಳಗಡೆ ಕುಳಿತಿದ್ದ ಚಾಲಕನನ್ನು ಬಲವಂತವಾಗಿ ಹೊರಗೆ ಎಳೆದು ಹಾಕಿ, ಯಾವುದೇ ಕರುಣೆಯಿಲ್ಲದೆ ಹಿಗ್ಗಾಮುಗ್ಗವಾಗಿ ಥಳಿಸಲು ಪ್ರಾರಂಬಿಸಿದ್ದಾರೆ.
ಯುವತಿಯನ್ನು ಕೆಳಗಿಳಿಸಿ ದುಷ್ಕೃತ್ಯ ಘಟನೆ ನಡೆದ ಸಮಯದಲ್ಲಿ ಕಾರಿನಲ್ಲಿ ಯುವತಿಯೊಬ್ಬರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಚಾಲಕನ ಮೇಲೆ ಮುಗಿಬಿದ್ದ ಗ್ಯಾಂಗ್, ಕಾರಿನಲ್ಲಿದ್ದ ಯುವತಿಯನ್ನು ಕೆಳಗೆ ಇಳಿಸಿ ಆಕರೆದುರೇ ಚಾಲಕನ ಮೇಲೆ ಡೆಡ್ಲಿ ಅಟ್ಯಾಕ್ ನಡೆಸಿದೆ. ರಸ್ತೆಯಲ್ಲೇ ಸಾರ್ವಜನಿಕವಾಗಿ ಚಾಲಕನನ್ನು ಹಿಂಸಾತ್ಮಕವಾಗಿ ಥಳಿಸುತ್ತಿದ್ದರೂ, ಯಾರಿಗೂ ಹೆದರದ ಪುಂಡರು ತಮ್ಮ ಅಟ್ಟಹಾಸ ಮುಂದುವರಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಯುವತಿ ಹಾಗೂ ಇತರರು ತೀವ್ರ ಆತಂಕಕ್ಕೆ ಒಳಗಾಗಿದ್ದರು.
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ ದುಷ್ಕರ್ಮಿಗಳು ಉಬರ್ ಚಾಲಕನ ಮೇಲೆ ನಡೆಸಿದ ಈ ಮಾರಣಾಂತಿಕ ಹಲ್ಲೆಯ ಸಂಪೂರ್ಣ ದೃಶ್ಯಗಳು ಹತ್ತಿರದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿವೆ. ಗ್ಯಾಂಗ್ ಕಟ್ಟಿ ಬಂದು ಚಾಲಕನ ಮೇಲೆ ಮುಗಿಬೀಳುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ವಿಡಿಯೋ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರ ಭಯವೇ ಇಲ್ಲದ ಪುಂಡರು! ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಇಂತಹ ಪುಂಡ-ಪೋಕರಿಗಳ ಉಪಟಳ ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ರಕ್ಷಣೆಯ ಭಾವನೆ ಕಡಿಮೆಯಾಗುತ್ತಿದೆ. ತಡರಾತ್ರಿ ರಾಜಾರೋಷವಾಗಿ ಹಲ್ಲೆ ನಡೆಸಿ ಸಾರ್ವಜನಿಕರ ಶಾಂತಿ ಕದಡುತ್ತಿರುವ ಈ ಗ್ಯಾಂಗ್ಗಳಿಗೆ ಕಾನೂನು ಅಂದರೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. “ಬೆಂಗಳೂರಿನಲ್ಲಿ ಪುಂಡ ಪೋಕರಿಗಳಿಗೆ ಪೊಲೀಸರ ಯಾವುದೇ ಭಯವೇ ಇಲ್ಲದಂತಾಗಿದೆ” ಎಂದು ಸಾರ್ವಜನಿಕರು ಹಾಗೂ ವಾಹನ ಚಾಲಕರು ತೀವ್ರ ಆಕ್ರೋಶ ಹೊರಹಾಕುತ್ತಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.








