ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಿದೆ. ಅಪೌಷ್ಟಿಕತೆ ಮತ್ತು ರಕ್ತಹೀನತೆ ನಿವಾರಿಸುವ ಉದ್ದೇಶದಿಂದ, 2026-27ನೇ ಶೈಕ್ಷಣಿಕ ಸಾಲಿನಲ್ಲಿ ಎಲ್.ಕೆ.ಜಿ ಯಿಂದ 10ನೇ ತರಗತಿಯವರೆಗಿನ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ವಾರದ ಎಲ್ಲಾ 6 ದಿನಗಳೂ ಪೂರಕ ಪೌಷ್ಟಿಕ ಆಹಾರವಾಗಿ ಮೊಟ್ಟೆ ಅಥವಾ ಬಾಳೆಹಣ್ಣನ್ನು ವಿತರಿಸಲು ಶಾಲಾ ಶಿಕ್ಷಣ ಇಲಾಖೆ (ಪಿ.ಎಂ. ಪೋಷಣ್) ಕಡ್ಡಾಯ ಆದೇಶ ಹೊರಡಿಸಿದೆ.
ಅಜೀಂ ಪ್ರೇಮ್ಜೀ ಫೌಂಡೇಶನ್ (APF) ಸಂಸ್ಥೆಯ ಆರ್ಥಿಕ ಅನುದಾನದ ನೆರವಿನೊಂದಿಗೆ ಈ ಯೋಜನೆಯನ್ನು ಯಶಸ್ವಿಯಾಗಿ ವಿಸ್ತರಿಸಲಾಗುತ್ತಿದ್ದು, ಸದ್ಯ ಜಿಲ್ಲಾ ಮಟ್ಟದಲ್ಲಿ ಶೇ. 50 ರಿಂದ 60 ರಷ್ಟಿರುವ ವಿತರಣೆಯ ಪ್ರಮಾಣವನ್ನು ಪ್ರಸಕ್ತ ಸಾಲಿನಲ್ಲಿ ಶೇ. 90 ಕ್ಕೆ ಹೆಚ್ಚಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಪ್ರಮುಖ ಮಾರ್ಗಸೂಚಿಗಳು ಮತ್ತು ನಿಯಮಗಳು:
6 ದಿನಗಳೂ ಕಡ್ಡಾಯ ವಿತರಣೆ: ಸೋಮವಾರದಿಂದ ಶನಿವಾರದವರೆಗೆ ಮಧ್ಯಾಹ್ನದ ಉತ್ತರದ ಜೊತೆಗೆ ಪೋಷಕರ ಒಪ್ಪಿಗೆ ಪಡೆದ ವಿದ್ಯಾರ್ಥಿಗಳಿಗೆ ಮೊಟ್ಟೆ ಹಾಗೂ ಮೊಟ್ಟೆ ಸೇವಿಸದವರಿಗೆ ಬಾಳೆಹಣ್ಣನ್ನು ಕಡ್ಡಾಯವಾಗಿ ನೀಡಬೇಕು.
ಪೋಷಕರ ಅನುಮತಿ ಅತ್ಯಗತ್ಯ: ಶೈಕ್ಷಣಿಕ ವರ್ಷದ ಆರಂಭದಲ್ಲೇ ಹೊಸದಾಗಿ ಸೇರಿದ ಹಾಗೂ ಹಳೆಯ ವಿದ್ಯಾರ್ಥಿಗಳ ಪೋಷಕರಿಂದ ಮೊಟ್ಟೆ/ಬಾಳೆಹಣ್ಣು ಸೇವನೆಯ ಕುರಿತು ಲಿಖಿತ ಒಪ್ಪಿಗೆಯನ್ನು ಪಡೆಯಬೇಕು. ಪೋಷಕರು ನೀಡಿದ ಸಂಖ್ಯೆಯ ಆಧಾರದ ಮೇಲೆಯೇ ವಿತರಣೆ ನಡೆಯಲಿದೆ.
ಮಾಹಿತಿ ದಾಖಲಾತಿ: ಶಾಲೆಯ ಮಾಸಿಕ ಹಾಜರಾತಿ, ಮೊಟ್ಟೆ ಮತ್ತು ಬಾಳೆಹಣ್ಣು ಸೇವಿಸಿದ ಮಕ್ಕಳ ಸಂಖ್ಯೆ ಹಾಗೂ ಖರೀದಿ ಪ್ರಮಾಣದ ವಿವರಗಳನ್ನು ‘SATS’ ತಂತ್ರಾಂಶದಲ್ಲಿ ಕಡ್ಡಾಯವಾಗಿ ನಿರ್ವಹಿಸಬೇಕು.
ಜಾಗೃತಿ ಮೂಡಿಸುವುದು: ಮಕ್ಕಳಲ್ಲಿ ಮೊಟ್ಟೆ ಸೇವನೆಯನ್ನು ಪ್ರೋತ್ಸಾಹಿಸಲು ಗೋಡೆ ಚಿತ್ರಗಳು, ಪ್ರಾರ್ಥನಾ ಸಭೆಯಲ್ಲಿ ಭಾಷಣ, ತಜ್ಞ ವೈದ್ಯರು ಹಾಗೂ ಪೌಷ್ಟಿಕಾಂಶ ಅಧಿಕಾರಿಗಳಿಂದ ಜಾಗೃತಿ ಸೆಷನ್ಗಳನ್ನು ಆಯೋಜಿಸಲು ಸೂಚಿಸಲಾಗಿದೆ.
ಕಟ್ಟುನಿಟ್ಟಿನ ಉಸ್ತುವಾರಿ: ಕಡಿಮೆ ಮೊಟ್ಟೆ ಬಳಕೆಯಾಗುವ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ಮತ್ತು ಉಪನಿರ್ದೇಶಕರು (DDPI) ಭೇಟಿ ನೀಡಿ ಪರಿಶೀಲಿಸಬೇಕು. ಪ್ರತಿ ತಿಂಗಳು ಬ್ಲಾಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ಇದರ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ.
ಮುಖ್ಯ ಗುರಿ: ಬರುವ ಸೆಪ್ಟೆಂಬರ್-2026ರ ವೇಳೆಗೆ ರಾಜ್ಯದ ಶಾಲೆಗಳಲ್ಲಿ ಶೇ. 80 ರಷ್ಟು ಮೊಟ್ಟೆ ಸೇವನೆಯ ಗುರಿಯನ್ನು ತಲುಪಬೇಕಾಗಿದ್ದು, ಈ ಯೋಜನೆಯನ್ನು ಯಶಸ್ವಿಗೊಳಿಸುವ ಸಂಪೂರ್ಣ ಜವಾಬ್ದಾರಿಯನ್ನು ಶಾಲಾ ಮುಖ್ಯ ಶಿಕ್ಷಕರು, ADPI ಗಳು ಹಾಗೂ ಇಒ-ಮಧ್ಯಾಹ್ನದ ಲೂಟ ಅಧಿಕಾರಿಗಳಿಗೆ ವಹಿಸಲಾಗಿದೆ.









