ಬರ್ಮಿಂಗ್ಹ್ಯಾಮ್: ಮಹಿಳಾ ಟಿ20 ವಿಶ್ವಕಪ್ನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತದ ವಿರುದ್ಧ 64 ರನ್ಗಳ ಹೀನಾಯ ಸೋಲು ಕಂಡಿದ್ದ ಪಾಕಿಸ್ತಾನ ತಂಡಕ್ಕೆ ಈಗ ಮತ್ತೊಂದು ಆಘಾತ ಎದುರಾಗಿದೆ. ನಿಗದಿತ ಅವಧಿಯಲ್ಲಿ ಓವರ್ಗಳನ್ನು ಪೂರ್ಣಗೊಳಿಸದ ಹಿನ್ನೆಲೆಯಲ್ಲಿ (ಸ್ಲೋ ಓವರ್ ರೇಟ್) ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಪಾಕಿಸ್ತಾನ ತಂಡಕ್ಕೆ ದಂಡ ವಿಧಿಸಿದೆ.
ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಮೈದಾನದಲ್ಲಿ ನಡೆದ ಗ್ರೂಪ್ ‘ಎ’ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನಿಗದಿಪಡಿಸಿದ ಸಮಯಕ್ಕಿಂತ ಒಂದು ಓವರ್ ಕಡಿಮೆ ಬೌಲಿಂಗ್ ಮಾಡಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಐಸಿಸಿ ಮ್ಯಾಚ್ ರೆಫ್ರಿ ಟ್ರುಡಿ ಆಂಡರ್ಸನ್ ಅವರು ಪಾಕ್ ತಂಡದ ಆಟಗಾರ್ತಿಯರಿಗೆ ಅವರ ಪಂದ್ಯದ ಸಂಭಾವನೆಯ ಶೇಕಡಾ 5 ರಷ್ಟು ದಂಡ ವಿಧಿಸಿ ಕಠಿಣ ಕ್ರಮ ಕೈಗೊಂಡಿದ್ದಾರೆ.
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22ರ ಪ್ರಕಾರ, ನಿಗದಿತ ಸಮಯ ಮುಗಿದ ನಂತರ ಬಾಕಿ ಉಳಿಯುವ ಪ್ರತಿ ಓವರ್ಗೆ ಪಂದ್ಯದ ಸಂಭಾವನೆಯ ಶೇಕಡಾ 5 ರಷ್ಟು ದಂಡ ವಿಧಿಸಲಾಗುತ್ತದೆ. ಪಾಕಿಸ್ತಾನ ತಂಡದ ನಾಯಕಿ ಫಾತಿಮಾ ಸನಾ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರಿಂದ ಯಾವುದೇ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲದೇ ದಂಡವನ್ನು ಖಾಯಂಗೊಳಿಸಲಾಗಿದೆ.
ಭಾರತದ ಬ್ಯಾಟಿಂಗ್ ಅಬ್ಬರ: ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಸ್ಮೃತಿ ಮಂಧಾನ ಅವರ ಅದ್ಭುತ 68 ರನ್ ಹಾಗೂ ರಿಚಾ ಘೋಷ್ ಅವರ ಬಿರುಸಿನ 34 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ಗೆ 170 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು.
ಪಾಕಿಸ್ತಾನ ಧೂಳೀಪಟ: 171 ರನ್ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ, ಭಾರತದ ಸ್ಪಿನ್ ಜಾಲಕ್ಕೆ ಸಿಲುಕಿ ಕೇವಲ 17 ಓವರ್ಗಳಲ್ಲಿ 106 ರನ್ಗಳಿಗೆ ಆಲೌಟ್ ಆಯಿತು.
ದೀಪ್ತಿ ಶರ್ಮಾ ಐತಿಹಾಸಿಕ ದಾಖಲೆ: ಭಾರತದ ಸ್ಟಾರ್ ಸ್ಪಿನ್ನರ್ ದೀಪ್ತಿ ಶರ್ಮಾ ಕೇವಲ 10 ರನ್ ನೀಡಿ 5 ವಿಕೆಟ್ ಕಡಿಯುವ ಮೂಲಕ ಪಾಕ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಈ ಮೂಲಕ ಅವರು ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ವಿಶ್ವ ದಾಖಲೆಯನ್ನೂ ಬರೆದರು. ಅವರಿಗೆ ಉತ್ತಮ ಸಾಥ್ ನೀಡಿದ ಶ್ರೀ ಚರಣಿ 21 ರನ್ಗಳಿಗೆ 3 ವಿಕೆಟ್ ಪಡೆದರು.
ರೆಕಾರ್ಡ್ ಬ್ರೇಕಿಂಗ್ ಪಂದ್ಯ: ಭಾರತ ಮತ್ತು ಪಾಕಿಸ್ತಾನ ನಡುವಿನ ಈ ರೋಮಾಂಚಕ ಪಂದ್ಯವನ್ನು ವೀಕ್ಷಿಸಲು ಬರೋಬ್ಬರಿ 18,814 ಪ್ರೇಕ್ಷಕರು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಇದು ಮಹಿಳಾ ವಿಶ್ವಕಪ್ನ ಗ್ರೂಪ್ ಹಂತದ ಪಂದ್ಯವೊಂದರಲ್ಲಿ ದಾಖಲಾದ ಅತಿ ಹೆಚ್ಚಿನ ಪ್ರೇಕ್ಷಕರ ಸಂಖ್ಯೆಯಾಗಿದೆ.







