ಒಂದು ವೇಳೆ ಭಾರತದ ಮೇಲೆ ದಾಳಿಯಾದರೆ ಅಮೆರಿಕವು ಅದರ ಸಹಾಯಕ್ಕೆ ಬರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜಂಟಿಯಾಗಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಟ್ರಂಪ್, “ನಮ್ಮ ನಡುವೆ ಅತ್ಯುತ್ತಮ ಸಂಬಂಧವಿದೆ ಎಂದು ನಾನು ಭಾವಿಸುತ್ತೇನೆ… ಒಂದು ವೇಳೆ ಅವರ (ಭಾರತದ) ಮೇಲೆ ದಾಳಿಯಾದರೆ, ನಾವು ಅವರಿಗೆ ಸಹಾಯ ಮಾಡಲು ಅಲ್ಲಿರುತ್ತೇವೆ… ಯಾರಾದರೂ ಆ ವ್ಯಕ್ತಿಯ (ಮೋದಿ) ಮೇಲೆ ದಾಳಿ ಮಾಡಿದರೆ, ನಾವು ಅಲ್ಲಿರುತ್ತೇವೆ… ಅವರ ಮೇಲೆ ದಾಳಿಯಾದಾಗ ಪ್ರಧಾನಿ ಮೋದಿ ನಾಯಕರಾಗಿದ್ದರೆ, ನಾವು ಖಂಡಿತವಾಗಿಯೂ ಸಹಾಯಕ್ಕೆ ನಿಲ್ಲಲಿದ್ದೇವೆ,” ಎಂದರು.
ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, “ಅದು ಅತ್ಯಂತ ಕಠಿಣವಾದ ವೃತ್ತಿ (ಕಡಲ ವೃತ್ತಿ). ನಾವು ಇದರ ಬಗ್ಗೆ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ನಾವು ಅವರನ್ನೆಲ್ಲಾ ಪ್ರೀತಿಸುತ್ತೇವೆ,” ಎಂದು ಹೇಳಿದರು.
ತಮ್ಮ 2020ರ ಭಾರತ ಪ್ರವಾಸವನ್ನು ನೆನಪಿಸಿಕೊಂಡ ಟ್ರಂಪ್, “ಕಳೆದ ಬಾರಿ ನಾನು ಭಾರತಕ್ಕೆ ಭೇಟಿ ನೀಡಿದ್ದಾಗ ಅದ್ಭುತ ಅನುಭವವಾಗಿತ್ತು. ನಾವು ಆ ಹೊಸ ಕ್ರೀಡಾಂಗಣವನ್ನು (ಮೊಟೆರಾ ಸ್ಟೇಡಿಯಂ) ಉದ್ಘಾಟಿಸಿದೆವು. ಅಲ್ಲಿ ಕೇವಲ 3,000-4,000 ಜನರಷ್ಟೇ ಇರಲಿಲ್ಲ; ಆ ಸ್ಟೇಡಿಯಂನ ಸಾಮರ್ಥ್ಯವೇ ಸುಮಾರು 1.5 ಲಕ್ಷ ಇತ್ತು, ಜೊತೆಗೆ ಹೊರಗಡೆ 2.5 ಲಕ್ಷ ಜನರಿದ್ದರು ಮತ್ತು ಹುಲ್ಲುಹಾಸಿನ ಮೇಲೆ 1 ಲಕ್ಷ ಜನರಿದ್ದರು… ಆ ದಾಖಲೆಗಳು ಇದುವರೆಗೆ ಮುರಿದಿವೆಯೋ ಇಲ್ಲವೋ ನನಗೆ ಗೊತ್ತಿಲ್ಲ… ಆದರೆ ನಾನು ಭಾರತದಲ್ಲಿ ಅದ್ಭುತ ಸಮಯವನ್ನು ಕಳೆದಿದ್ದೆ,” ಎಂದು ಸೇರಿಸಿದರು.
ಇದೇ ವೇಳೆ ಪ್ರಧಾನಿ ಮೋದಿಯವರ ಮೇಲೆ ಪ್ರಶಂಸೆಯ ಸುರಿಮಳೆಗೈದ ಟ್ರಂಪ್, ಅವರನ್ನು ಅತ್ಯಂತ ಕಠಿಣ ಮಾತುಕತೆಗಾರ (ಟಫ್ ನೆಗೋಷಿಯೇಟರ್) ಎಂದು ಕರೆದರು.
”ನೀವು ಈ ವ್ಯಕ್ತಿಯನ್ನು ಒಮ್ಮೆ ನೋಡಿ. ನಾನೊಂದು ಪಾಠ ಹೇಳಿಕೊಡುತ್ತೇನೆ. ಇವರು ಅತ್ಯಂತ ಸುಂದರವಾಗಿ ಕಾಣುವ ವ್ಯಕ್ತಿ. ನೋಡಲು ದೇವದೂತನಂತೆ (ಲೈಕ್ ಆನ್ ಏಂಜೆಲ್) ತುಂಬಾ ಸೌಮ್ಯವಾಗಿ ಕಾಣುತ್ತಾರೆ. ಆದರೆ ವಾಸ್ತವವಾಗಿ, ಅವರು ಎಷ್ಟು ಕಠಿಣವೋ ಅಷ್ಟೇ ಚಾಣಾಕ್ಷ ‘ಕಿಲ್ಲರ್’ (ಪ್ರಭಾವಶಾಲಿ ವ್ಯಕ್ತಿ)… ಆದರೆ ಅವರು ನೋಡಲು ತುಂಬಾ ಒಳ್ಳೆಯವರಂತೆ ಕಾಣುವುದರಿಂದ ನಿಮ್ಮನ್ನು ಆಶ್ಚರ್ಯಚಕಿತರನ್ನಾಗಿಸುತ್ತಾರೆ. ಇಂತಹ ಗುಣವಿರುವ ವ್ಯಕ್ತಿಗಳು ಜಗತ್ತಿನಲ್ಲಿ ತೀರಾ ವಿರಳ. ಜನರು ಇವರನ್ನು ತುಂಬಾ ಒಳ್ಳೆಯ ಮನುಷ್ಯ ಎನ್ನುತ್ತಾರೆ, ಆದರೆ ನಾನು ಹೇಳುತ್ತೇನೆ ಇವರು ಅತ್ಯಂತ ಕಠಿಣ ವ್ಯಕ್ತಿ. ಅವರು ವ್ಯಾಪಾರ ಮಾತುಕತೆಯಲ್ಲಿ ಅತ್ಯಂತ ಕಠಿಣವಾಗಿರುತ್ತಾರೆ. ಅವರು ಭಾರತದ ಜನರನ್ನು ಪ್ರೀತಿಸುತ್ತಾರೆ, ಜೊತೆಗೆ ಅಮೆರಿಕವನ್ನೂ ಪ್ರೀತಿಸುತ್ತಾರೆ. ನಾವು ಹೂಸ್ಟನ್‌ನಲ್ಲಿ ‘ಹೌಡಿ ಮೋದಿ’ ಕಾರ್ಯಕ್ರಮ ಮಾಡಿದ್ದೆವು, ಆಗ ಇಡೀ ಸ್ಟೇಡಿಯಂ ಭರ್ತಿಯಾಗಿತ್ತು… ನಾವು ಭವಿಷ್ಯದಲ್ಲಿ ಯಾವುದಾದರೊಂದು ಸಮಯದಲ್ಲಿ ಮತ್ತೆ ಭಾರತಕ್ಕೆ ಭೇಟಿ ನೀಡಲಿದ್ದೇವೆ,” ಎಂದು ಟ್ರಂಪ್ ಹೇಳಿದರು.
ಇದೇ ವೇಳೆ ಟ್ರಂಪ್ ಅವರೊಂದಿಗಿನ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸಮುದ್ರಯಾನದ ಸ್ವಾತಂತ್ರ್ಯವನ್ನು (ಫ್ರೀಡಂ ಆಫ್ ನ್ಯಾವಿಗೇಷನ್) ಯಾವಾಗಲೂ ಖಚಿತಪಡಿಸಿಕೊಳ್ಳಬೇಕು ಮತ್ತು ನಾವಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಭಾರತ ಯಾವಾಗಲೂ ಪ್ರತಿಪಾದಿಸುತ್ತದೆ ಎಂಬುದನ್ನು ಒತ್ತಿ ಹೇಳಿದರು.
”ಜಾಗತಿಕ ಕಡಲ ವ್ಯಾಪಾರದ ವಲಯದಲ್ಲಿ ವಿಶ್ವದ ವಿವಿಧ ಸಮುದ್ರಗಳಲ್ಲಿ ಲಕ್ಷಾಂತರ ಭಾರತೀಯ ನಾವಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಸುರಕ್ಷತೆಯೂ ಅಷ್ಟೇ ಮುಖ್ಯ ಎಂದು ನಾನು ನಂಬುತ್ತೇನೆ… ಇರಾನ್ ಜೊತೆಗಿನ ಒಪ್ಪಂದದಲ್ಲಿ ನಾವಿಕರ ಸುರಕ್ಷತೆಯನ್ನು ಖಾತ್ರಿಪಡಿಸಲಾಗುವುದು ಮತ್ತು ಅದಕ್ಕೆ ಆದ್ಯತೆ ನೀಡಲಾಗುವುದು ಎಂಬ ವಿಶ್ವಾಸ ನನಗಿದೆ,” ಎಂದು ಪ್ರಧಾನಿ ಮೋದಿ ಹೇಳಿದರು.








