ಬೆಂಗಳೂರು: ರಾಜ್ಯ ವಿಧಾನಪರಿಷತ್ನ ತೆರವಾಗಿರುವ ಏಳು ಸದಸ್ಯ ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದ್ದು, ಅಂತಿಮ ಹಂತದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಸಮಿತಿ ಸಭೆ ಕೊಠಡಿಯಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಶಾಸಕರು ಮತದಾನ ಮಾಡಲಿದ್ದಾರೆ.
ಸುಗಮ ಮತ್ತು ಗೌಪ್ಯ ಮತದಾನಕ್ಕಾಗಿ ಎರಡು ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮತಗಟ್ಟೆಯ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಸಂಖ್ಯಾಬಲದ ಲೆಕ್ಕಾಚಾರ ಹೀಗಿದೆ:
ವಿಧಾನಸಭೆಯ ಒಟ್ಟು ಶಾಸಕರ ಬಲಾಬಲ 222 ಆಗಿದ್ದು, ಒಬ್ಬ ಅಭ್ಯರ್ಥಿಯ ಗೆಲುವಿಗೆ 28 ಮತಗಳ ಅಗತ್ಯವಿದೆ.
ಕಾಂಗ್ರೆಸ್ (135 ಶಾಸಕರು): ಕಣಕ್ಕಿಳಿದಿರುವ ಐವರು ಅಭ್ಯರ್ಥಿಗಳ ಗೆಲುವಿಗೆ ಒಟ್ಟು 140 ಮತಗಳು ಬೇಕಾಗುತ್ತವೆ. ಕಾಂಗ್ರೆಸ್ ಬಳಿ ಸದ್ಯ 135 ಮತಗಳಿದ್ದು, 5 ಮತಗಳ ಕೊರತೆಯಿದೆ. ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್, ಇಬ್ಬರು ಪಕ್ಷೇತರರು ಹಾಗೂ ಸರ್ವೋದಯ ಪಕ್ಷದ ಶಾಸಕರು ಬೆಂಬಲಿಸಿದರೆ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಸುಲಭವಾಗಲಿದೆ.
ಬಿಜೆಪಿ (62 ಶಾಸಕರು): ಕಣದಲ್ಲಿರುವ ಇಬ್ಬರು ಅಭ್ಯರ್ಥಿಗಳ ಗೆಲುವಿಗೆ 56 ಮತಗಳ ಅಗತ್ಯವಿದ್ದು, ಬಿಜೆಪಿಯ ಬಳಿ 6 ಹೆಚ್ಚುವರಿ ಮತಗಳು ಉಳಿಯಲಿವೆ.
ಜೆಡಿಎಸ್ (18 ಶಾಸಕರು): ಮೈತ್ರಿಕೂಟದ ಬೆಂಬಲದೊಂದಿಗೆ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಜೆಡಿಎಸ್ಗೆ ಬಿಜೆಪಿಯ 6 ಹೆಚ್ಚುವರಿ ಮತಗಳು, ಜನಾರ್ದನ ರೆಡ್ಡಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲ ಸಿಕ್ಕರೂ 26 ಮತಗಳಾಗಲಿದ್ದು, ಗೆಲುವಿಗೆ ಇನ್ನೂ 2 ಮತಗಳ ಕೊರತೆ ಎದುರಾಗಲಿದೆ.
ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು:
ಕಾಂಗ್ರೆಸ್: ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರ್, ಬಿ.ಎಸ್. ಶಿವಣ್ಣ, ಪಿ.ವಿ. ಮೋಹನ್ ಮತ್ತು ವಿನಯ್ ಕಾರ್ತಿಕ್.
ಬಿಜೆಪಿ: ಲಿಂಗರಾಜ್ ಪಾಟೀಲ್ ಮತ್ತು ರಘು ಕೌಟಿಲ್ಯ.
ಬಿಜೆಪಿ-ಜೆಡಿಎಸ್ ಮೈತ್ರಿ: ಗೋವಿಂದ ರಾಜು.
ಇಂದು ನಡೆಯಲಿರುವ ಈ ಜಿದ್ದಾಜಿದ್ದಿನ ಚುನಾವಣೆಯಲ್ಲಿ ಯಾವ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.








