ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ನಲ್ಲಿ ನಡೆಯುತ್ತಿರುವ ಜಿ7 (G7) ಶೃಂಗಸಭೆಯ ಸಂದರ್ಭದಲ್ಲಿ ಭೇಟಿಯಾಗಿದ್ದು, ಈ ವೇಳೆ ಟ್ರಂಪ್ ಅವರು ಪ್ರಧಾನಿ ಮೋದಿ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ತಮ್ಮ ವರ್ಕಿಂಗ್ ಲಂಚ್ (ಕೆಲಸದ ನಡುವಿನ ಭೋಜನ) ಹೇಳಿಕೆಯಲ್ಲಿ, ಟ್ರಂಪ್ ಅವರು ಮೋದಿಯವರನ್ನು “ಶಾಂತ, ನಿರಾಳ ಮತ್ತು ಕಂಪ್ಲೀಟ್ ಕಿಲ್ಲರ್ (ಅತ್ಯಂತ ಪ್ರಭಾವಶಾಲಿ)” ಎಂದು ಕರೆದಿದ್ದಾರೆ ಎಂದು ವರದಿಯಾಗಿದೆ. ಆನಂತರ, ಕಳೆದ 16 ತಿಂಗಳುಗಳಲ್ಲಿ ನಡೆದ ಅವರ ಮೊದಲ ದ್ವಿಪಕ್ಷೀಯ ಸಭೆಯಲ್ಲೂ ಟ್ರಂಪ್ ಈ ಪ್ರಶಂಸೆಯನ್ನು ಮುಂದುವರಿಸಿದರು.
ಭೋಜನಕೂಟದಲ್ಲಿದ್ದ ಅಧಿಕಾರಿಗಳ ಪ್ರಕಾರ, ಟ್ರಂಪ್ ಅವರು “ಶಾಂತ, ನಿರಾಳ ಮತ್ತು ಟೋಟಲ್ ಕಿಲ್ಲರ್ ಆಗಿರುವ ಪ್ರಧಾನಿ ಮೋದಿಯವರಂತಲ್ಲ ನಾನು… ಅವರನ್ನು ಒಮ್ಮೆ ನೋಡಿ..” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಬಳಿಕ ಉಭಯ ನಾಯಕರು ಔಪಚಾರಿಕ ಸಭೆಗೆ ಕುಳಿತರು. ಈ ಸಭೆಯಲ್ಲೂ ಟ್ರಂಪ್ ಅವರು ಮೋದಿಯವರ ಮೇಲೆ ಪ್ರಶಂಸೆಯ ಸುರಿಮಳೆಗೈದರು. ಮೋದಿಯವರನ್ನು “ಬಹಳ ಸುಂದರವಾಗಿ ಕಾಣುವ ವ್ಯಕ್ತಿ, ತುಂಬಾ ಒಳ್ಳೆಯವರು, ದೇವದೂತನಂತೆ (ಲೈಕ್ ಆನ್ ಏಂಜೆಲ್)” ಎಂದು ಬಣ್ಣಿಸಿದರು. ಅಲ್ಲದೆ, ಮೋದಿ ಅವರು ತುಂಬಾ ಒಳ್ಳೆಯ ಮನುಷ್ಯನಾಗಿದ್ದರೂ ಸಹ, ಮಾತುಕತೆಗಳ ವಿಷಯದಲ್ಲಿ ಅತ್ಯಂತ ಕಠಿಣ ವ್ಯಕ್ತಿ (ಟಫ್ ನೆಗೋಷಿಯೇಟರ್) ಎಂದು ಟ್ರಂಪ್ ಕರೆದಿದ್ದಾರೆ.
ಜಿ7 ಶೃಂಗಸಭೆಯ ಹಲವು ಸಂದರ್ಭಗಳಲ್ಲಿ ಟ್ರಂಪ್ ಮತ್ತು ಮೋದಿ ಪರಸ್ಪರ ಸಂವಹನ ನಡೆಸುತ್ತಿರುವುದು ಕಂಡುಬಂದಿದ್ದರೂ, ದ್ವಿಪಕ್ಷೀಯ ಮಾತುಕತೆಗಳು ಬಾಕಿ ಉಳಿದಿವೆ. ಈ ಭೇಟಿಯು ಪ್ರಮುಖವಾಗಿ ಎರಡು ಕಾರಣಗಳಿಗಾಗಿ ಮಹತ್ವ ಪಡೆದುಕೊಂಡಿದೆ – ಮೊದಲನೆಯದು ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದದ ನಿರೀಕ್ಷೆ, ಮತ್ತು ಎರಡನೆಯದು ಗಲ್ಫ್ ಪ್ರದೇಶದಲ್ಲಿ ಅಮೆರಿಕ ನಡೆಸಿದ ಹಡಗು ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ ನಂತರ ಭಾರತೀಯ ನಾವಿಕರ ಸುರಕ್ಷತೆಯ ಬಗ್ಗೆ ಭಾರತಕ್ಕಿರುವ ಕಳವಳ.
ಇದಕ್ಕೂ ಒಂದು ದಿನ ಮುಂಚೆ, ಟ್ರಂಪ್ ಅವರ ಪಕ್ಕದಲ್ಲೇ ಕುಳಿತಿದ್ದ ಪ್ರಧಾನಿ ಮೋದಿ ಅವರು ಹಡಗುಗಳ ಮೇಲಿನ ದಾಳಿಯ ವಿಷಯವನ್ನು ಪ್ರಸ್ತಾಪಿಸಿ, ನಾವಿಕರನ್ನು ರಕ್ಷಿಸಲು ಜಾಗತಿಕ ಪ್ರಯತ್ನಗಳು ನಡೆಯಬೇಕು ಎಂದು ಕರೆ ನೀಡಿದ್ದರು.
”ಜಾಗತಿಕ ಕಡಲ ವ್ಯಾಪಾರದ ಮೂಲಕ ಎಲ್ಲಾ ದೇಶಗಳನ್ನು ಸಂಪರ್ಕಿಸುವ ನಾವಿಕರ ಸುರಕ್ಷತೆಯು ನಮ್ಮ ಜವಾಬ್ದಾರಿಯಾಗಿದೆ. ಸಮುದ್ರ ಮಾರ್ಗಗಳು ಸುರಕ್ಷಿತವಾಗಿರುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು ಮತ್ತು ನಾವಿಕರು ಯಾವುದೇ ಭಯವಿಲ್ಲದೆ ತಮ್ಮ ಕೆಲಸವನ್ನು ಮಾಡಲು ಸಾಧ್ಯವಾಗಬೇಕು. ಈ ವಿಷಯಗಳಲ್ಲಿ ಎಲ್ಲಾ ಪಾಲುದಾರರೊಂದಿಗೆ ಕೆಲಸ ಮಾಡಲು ಭಾರತ ಸಂಪೂರ್ಣವಾಗಿ ಸಿದ್ಧವಾಗಿದೆ,” ಎಂದು ಮೋದಿ ಅವರು ತಮ್ಮ ಪಕ್ಕದಲ್ಲೇ ಟ್ರಂಪ್ ಕುಳಿತಿದ್ದ ಅಧಿವೇಶನದಲ್ಲಿ ಹೇಳಿದ್ದರು.
ಮತ್ತೊಂದೆಡೆ, ಭಾರತದ ಆಮದುಗಳ ಮೇಲೆ ಟ್ರಂಪ್ 50% ಸುಂಕ ಹೇರಿದ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಹಳಸಿದ್ದವು. ಆದರೆ ಈಗ ಸಂಭವನೀಯ ಭಾರತ-ಅಮೆರಿಕ ವ್ಯಾಪಾರ ಒಪ್ಪಂದವು ಆರ್ಥಿಕ ಸಂಬಂಧಗಳಲ್ಲಿ ದೊಡ್ಡ ಮಹತ್ವದ ತಿರುವು ನೀಡಬಹುದು ಎಂದು ನಿರೀಕ್ಷಿಸಲಾಗಿದೆ.
ಉಭಯ ನಾಯಕರು ಕೊನೆಯ ಬಾರಿಗೆ ಮಾತುಕತೆ ನಡೆಸಿದ್ದು ಫೆಬ್ರವರಿ 2025 ರಲ್ಲಿ, ಪ್ರಧಾನಿ ಮೋದಿ ಅವರು ವಾಷಿಂಗ್ಟನ್ಗೆ ಅಧಿಕೃತ ಭೇಟಿ ನೀಡಿದ್ದ ಸಂದರ್ಭದಲ್ಲಿ.
ಅದಾದ ಕೆಲವು ತಿಂಗಳುಗಳ ನಂತರ, ಅಂದರೆ ಮೇ ತಿಂಗಳಲ್ಲಿ, ‘ಆಪರೇಷನ್ ಸಿಂಧೂರ್’ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಏರ್ಪಡಿಸುವಲ್ಲಿ ತಾವೇ ಮಧ್ಯಸ್ಥಿಕೆ ವಹಿಸಿದ್ದಾಗಿ ಟ್ರಂಪ್ ಹೇಳಿಕೊಂಡಿದ್ದರು. ಆದರೆ ಭಾರತ ಈ ವಾದವನ್ನು ಪದೇ ಪದೇ ನಿರಾಕರಿಸಿತ್ತು. ಆ ಘಟನೆಯ ನಂತರ ಉಭಯ ನಾಯಕರು ಮುಖಾಮುಖಿಯಾಗುತ್ತಿರುವುದು ಇದೇ ಮೊದಲು.








