ಬೆಂಗಳೂರು: ತಾತ ಸ್ವತಃ ಸಂಪಾದಿಸಿದ ಆಸ್ತಿಯು ಕುಟುಂಬದ ಹಂಚಿಕೆಯ ಬಳಿಕ ಮಗನ ಪಾಲಿಗೆ ಬಂದರೆ, ಅದು ಆತನ ವೈಯಕ್ತಿಕ ಆಸ್ತಿಯಾಗಿಯೇ ಪರಿಗಣಿಸಲಾಗುತ್ತದೆ. ಅಂತಹ ಆಸ್ತಿಯನ್ನು ಹಿಂದೂ ಅವಿಭಕ್ತ ಕುಟುಂಬದ ಆಸ್ತಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ, ಆ ಆಸ್ತಿಯಲ್ಲಿ ಮೊಮ್ಮಕ್ಕಳು ಪಾಲು ಕೇಳುವ ಹಕ್ಕು ಹೊಂದಿರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ಡಿ.ಕೆ. ಸಿಂಗ್ ನೇತೃತ್ವದ ವಿಭಾಗೀಯ ಪೀಠವು, ಅಮೆರಿಕದಲ್ಲಿ ನೆಲೆಸಿರುವ ಉಷಾ ಎನ್. ಸ್ವಾಮಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ.
ನ್ಯಾಯಾಲಯದ ಅಭಿಪ್ರಾಯದಂತೆ, ತಾತ ತನ್ನ ಪರಿಶ್ರಮದಿಂದ ಸಂಪಾದಿಸಿದ ಆಸ್ತಿಯನ್ನು ಮಕ್ಕಳಿಗೆ ಹಂಚಿಕೆ ಮಾಡಿದ ಬಳಿಕ, ಅದು ಮಗನ ವೈಯಕ್ತಿಕ ಆಸ್ತಿಯಾಗಿ ಪರಿವರ್ತನೆಯಾಗುತ್ತದೆ. ಅದನ್ನು ಪಿತ್ರಾರ್ಜಿತ ಅಥವಾ ಜಂಟಿ ಕುಟುಂಬದ ಆಸ್ತಿ ಎಂದು ಪರಿಗಣಿಸಲು ಅವಕಾಶವಿಲ್ಲ.ಇಂತಹ ಆಸ್ತಿಯನ್ನು ಹೊಂದಿರುವ ವ್ಯಕ್ತಿಗೆ, ತನ್ನ ಇಚ್ಛೆಯಂತೆ ಯಾರಿಗಾದರೂ ನೀಡುವ ಅಥವಾ ಮಾರಾಟ ಮಾಡುವ ಪೂರ್ಣ ಹಕ್ಕು ಇರುತ್ತದೆ. ಕುಟುಂಬದ ಇತರ ಸದಸ್ಯರು ಅದರ ಮೇಲೆ ಹಕ್ಕು ಚಲಾಯಿಸಲು ಸಾಧ್ಯವಿಲ್ಲ.ಸ್ವಯಾರ್ಜಿತ ಆಸ್ತಿಯ ಮೇಲೆ ಮೊಮ್ಮಕ್ಕಳು ಅಥವಾ ಇತರ ಕುಟುಂಬ ಸದಸ್ಯರು ಪಾಲು ಕೇಳಲು ಕಾನೂನಾತ್ಮಕ ಆಧಾರವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ
ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ವಿವಾದಿತ ಆಸ್ತಿಗಳು ಅರ್ಜಿದಾರರ ತಾತ ಸ್ವತಃ ಸಂಪಾದಿಸಿದ್ದವು ಎಂಬುದು ಸಾಬೀತಾಗಿದೆ ಎಂದು ಹೇಳಿದೆ. ಬಳಿಕ ಆಸ್ತಿಯನ್ನು ಕುಟುಂಬದ ಒಪ್ಪಂದದ ಆಧಾರದ ಮೇಲೆ ಮಕ್ಕಳ ನಡುವೆ ಹಂಚಿಕೆ ಮಾಡಲಾಗಿತ್ತು.ಈ ಹಂಚಿಕೆಯ ಮೂಲಕ ತಂದೆಗೆ ಬಂದ ಆಸ್ತಿ, ಅವರ ವೈಯಕ್ತಿಕ ಆಸ್ತಿಯಾಗುತ್ತದೆ. ಅದನ್ನು ಪೂರ್ವಜರಿಂದ ಬಂದ ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅರ್ಜಿದಾರರಾದ ಉಷಾ ಎನ್. ಸ್ವಾಮಿ ಅವರು, ಆಸ್ತಿಗಳು ಜಂಟಿ ಕುಟುಂಬದ ಆಸ್ತಿಗಳಾಗಿದ್ದವು ಎಂದು ವಾದಿಸಿದ್ದರು. ಆದರೆ ಈ ವಾದವನ್ನು ಸಮರ್ಥಿಸುವಂತಹ ದಾಖಲೆಗಳು ಅಥವಾ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಮಂಡಿಸಲು ವಿಫಲರಾದರು.ಹೀಗಾಗಿ, ತಾತನ ಸ್ವಯಾರ್ಜಿತ ಆಸ್ತಿಯಲ್ಲಿ ಪಾಲು ಕೋರುವ ಅವರ ಅರ್ಜಿಗೆ ಕಾನೂನುಬದ್ಧ ಆಧಾರವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿ, ಅರ್ಜಿಯನ್ನು ತಿರಸ್ಕರಿಸಿತು.
ಉಷಾ ಎನ್. ಸ್ವಾಮಿ ಅವರು 1979ರಲ್ಲಿ ವೈದ್ಯರಾದ ಜವರಯ್ಯ ಎನ್. ಸ್ವಾಮಿ ಅವರನ್ನು ವಿವಾಹವಾಗಿ ಬಳಿಕ ಅಮೆರಿಕದಲ್ಲಿ ನೆಲೆಸಿದ್ದರು. ತಮ್ಮ ಅನುಮತಿ ಅಥವಾ ಮಾಹಿತಿಯಿಲ್ಲದೆ ಕುಟುಂಬದ 10 ಎಕರೆ ಭೂಮಿಯನ್ನು ಮಾರಾಟ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದರು. ಅಲ್ಲದೆ, ತಂದೆಗೆ ಸೇರಿದ ಆಸ್ತಿಯಲ್ಲಿ ಕಲ್ಲುಗಣಿಗಾರಿಕೆ ನಡೆಸಿ ಗಳಿಸಿದ ಹಣದಿಂದ ಇತರ ಆಸ್ತಿಗಳನ್ನು ಖರೀದಿಸಲಾಗಿದೆ ಎಂದು ವಾದಿಸಿದ್ದರು. ಈ ಎಲ್ಲ ಆಸ್ತಿಗಳು ಮೂಲತಃ ಪೂರ್ವಜರಿಂದ ಬಂದ ಜಂಟಿ ಕುಟುಂಬದ ಆಸ್ತಿಗಳಾಗಿರುವುದರಿಂದ, ಆಸ್ತಿ ಹಾಗೂ ಬ್ಯಾಂಕ್ ಠೇವಣಿಗಳಲ್ಲಿ ತಮ್ಮ ಪಾಲು ನೀಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ತಮ್ಮ ವಾದಕ್ಕೆ ಪೂರಕವಾದ ದೃಢ ಸಾಕ್ಷ್ಯಗಳನ್ನು ಸಲ್ಲಿಸಲು ಸಾಧ್ಯವಾಗದ ಕಾರಣ, ಹೈಕೋರ್ಟ್ ಅವರ ಮನವಿಯನ್ನು ತಿರಸ್ಕರಿಸಿದೆ.








