ನವದೆಹಲಿ: ಸರ್ಕಾರಿ ಅಥವಾ ಖಾಸಗಿ ವಲಯದ ಉದ್ಯೋಗ ನೇಮಕಾತಿಯಲ್ಲಿ ಇತ್ತೀಚೆಗೆ ಕೇಳಿಬರುತ್ತಿರುವ ಅತಿಯಾದ ವಿದ್ಯಾರ್ಹತೆಯ (Overqualification) ವಿವಾದದ ಕುರಿತು ಸುಪ್ರೀಂ ಕೋರ್ಟ್ ಸ್ಪಷ್ಟ ತೀರ್ಪನ್ನು ನೀಡಿದೆ. ನಿಗದಿತ ಹುದ್ದೆಗೆ ಅಗತ್ಯವಿರುವ ವಿದ್ಯಾರ್ಹತೆಗಿಂತ ಹೆಚ್ಚಿನ ಪದವಿ ಪಡೆದ ಅಭ್ಯರ್ಥಿಗಳು, ಕೇವಲ ತಾವು ಹೆಚ್ಚು ಓದಿದ್ದೇವೆ ಎಂಬ ಕಾರಣಕ್ಕೆ ಆ ಹುದ್ದೆಯನ್ನು ಪಡೆಯಲು ಹಕ್ಕಿನಿಂದ ಒತ್ತಾಯಿಸುವಂತಿಲ್ಲ ಎಂದು ನ್ಯಾಯಾಲಯ ಖಡಕ್ ಆಗಿ ಹೇಳಿದೆ.
ಯಾವುದೇ ಒಂದು ಹುದ್ದೆಗೆ ನೇಮಕಾತಿ ಮಾಡುವಾಗ, ಆ ಹುದ್ದೆಯ ನಿರ್ವಹಣೆಗೆ ನಿಗದಿಪಡಿಸಲಾದ ವಿದ್ಯಾರ್ಹತೆಯೇ ಮಾನದಂಡವಾಗಬೇಕು. ಅತಿಯಾದ ಅರ್ಹತೆ ಹೊಂದಿದವರು ಆ ಹುದ್ದೆಗೆ ಸೂಕ್ತವಲ್ಲ ಎಂದು ಉದ್ಯೋಗದಾತರು ಪರಿಗಣಿಸಿದರೆ, ಅದನ್ನು ಪ್ರಶ್ನಿಸುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ನೇಮಕಾತಿ ಪ್ರಕ್ರಿಯೆಯಲ್ಲಿ ಯಾವ ಅಭ್ಯರ್ಥಿ ಸೂಕ್ತ ಮತ್ತು ಯಾರಿಗೆ ಆದ್ಯತೆ ನೀಡಬೇಕು ಎಂಬುದು ಸಂಪೂರ್ಣವಾಗಿ ಉದ್ಯೋಗದಾತರ ವಿವೇಚನೆಗೆ ಬಿಟ್ಟ ವಿಷಯವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಅರ್ಹತೆ ಹೊಂದಿದ್ದಾರೆ ಎಂಬ ಕಾರಣಕ್ಕೆ ಅವರನ್ನು ನೇಮಿಸಿಕೊಳ್ಳಲೇಬೇಕೆಂಬ ನಿಯಮವಿಲ್ಲ.
ಅತಿಯಾದ ಅರ್ಹತೆ ಹೊಂದಿದವರು ಭವಿಷ್ಯದಲ್ಲಿ ಆ ಕೆಲಸದಲ್ಲಿ ಅತೃಪ್ತಿ ಹೊಂದಬಹುದು ಅಥವಾ ಬೇರೆ ಉತ್ತಮ ಅವಕಾಶ ಸಿಕ್ಕಾಗ ಹುದ್ದೆಯನ್ನು ಬಿಟ್ಟು ಹೋಗಬಹುದು ಎಂಬ ಆತಂಕ ಉದ್ಯೋಗದಾತರಿಗೆ ಇರುತ್ತದೆ. ಇಂತಹ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಹುದ್ದೆಗೆ ಸರಿಹೊಂದುವವರನ್ನೇ ಆಯ್ಕೆ ಮಾಡುವುದು ಆಡಳಿತಾತ್ಮಕವಾಗಿ ಸರಿಯಾದ ಕ್ರಮ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.








