ಬೆಂಗಳೂರು: ಕೆ ಎಸ್ ಎಸ್ ಐ ಡಿ ಸಿ ಮತ್ತು ಬೆಂಗಳೂರು ನಗರ ನೀರು ಸರಬರಾಜು ಮಂಡಳಿಯ ಗ್ರೂಪ್ ಎ ಮತ್ತು ಬಿ ವಿವಿಧ ಹುದ್ದೆಗಳಿಗಾಗಿ ನಡೆಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಅಂತಿಮ ಅಂಕಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಗುರುವಾರ ಪ್ರಕಟಿಸಿದೆ.
ಸಂಬಂಧಪಟ್ಟ ಸಂಸ್ಥೆಗಳಿಗೆ ಅಂತಿಮ ಅಂಕಪಟ್ಟಿಯನ್ನು ಹಸ್ತಾಂತರಿಸಿ ನೇಮಕಾತಿ ಪ್ರಾಧಿಕಾರದಿಂದ ನಿಯಮಾನುಸಾರ ಆಯ್ಕೆಪಟ್ಟಿ ಪ್ರಕಟಿಸಲು ಕ್ರಮ ವಹಿಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ಅಧಿಕಾರಿ: ರೈ ವಿವಿ ಅಭ್ಯರ್ಥಿಗಳೂ ಅರ್ಹ
ಕೃಷಿ ಇಲಾಖೆಯ ಮೂಲ ವೃಂದದಲ್ಲಿ ಖಾಲಿ ಇದ್ದ 671 (ಹಿಂಬಾಕಿ) ಮತ್ತು ಕಲ್ಯಾಣ ಕರ್ನಾಟಕ ವೃಂದದಲ್ಲಿ ಖಾಲಿ ಇದ್ದ 273 (ಹಿಂಬಾಕಿ) ಗ್ರೂಪ್-ಬಿ ವೃಂದದ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು.
ಯುಜಿಸಿ ಅನುಮೋದಿತ ‘ರೈ ಟೆಕ್ನಾಲಜಿ ಯೂನಿವರ್ಸಿಟಿ’ಯಿಂದ (RAI TECHNOLOGY UNIVERSTIY) ಬಿ.ಎಸ್ಸಿ. (ಅಗ್ರಿ) ಪದವಿ ಪಡೆದಿರುವ ಎಲ್ಲ ವಿದ್ಯಾರ್ಥಿಗಳು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಉಳಿದಂತೆ, ಈ ಸಂಬಂಧ ಹಿಂದೆ ಹೊರಡಿಸಿದ್ದ ಅಧಿಸೂಚನೆಯಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.








