ನೋಯ್ಡಾ: ಫರಿದಾಬಾದ್-ಜೆವಾರ್ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಯ ಮೇಲ್ಸೇತುವೆ (Flyover) ನಿರ್ಮಾಣ ಕಾಮಗಾರಿಯ ವೇಳೆ, ಗಿರ್ಡರ್‌ಗಳನ್ನು ಮೇಲಕ್ಕೆತ್ತುತ್ತಿದ್ದ ಭಾರೀ ಗಾತ್ರದ ಕ್ರೇನ್ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಹಲವಾರು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಈ ಮೇಲ್ಸೇತುವೆಯು ಜೆವಾರ್‌ನಲ್ಲಿರುವ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸಲು ನಿರ್ಮಿಸಲಾಗುತ್ತಿದೆ.
ಸಂಜೆ ಸುರಿದ ಭಾರೀ ಮಳೆಯಿಂದಾಗಿ ನಿರ್ಮಾಣ ಸ್ಥಳವು ಕೆಸರುಮಯವಾಗಿ, ಜಾರುವಂತಾಗಿತ್ತು. ಮಳೆ ಕಡಿಮೆಯಾದ ನಂತರ ಕಾರ್ಮಿಕರು ಮತ್ತೆ ಕೆಲಸಕ್ಕೆ ಹಾಜರಾಗಿದ್ದರು. ಮೇಲ್ಸೇತುವೆಯ ಗಿರ್ಡರ್‌ಗಳನ್ನು ಕ್ರೇನ್ ಮೂಲಕ ಮೇಲಕ್ಕೆತ್ತುತ್ತಿದ್ದಾಗ, ಇದ್ದಕ್ಕಿದ್ದಂತೆ ಕ್ರೇನ್ ಸಮತೋಲನ ತಪ್ಪಿ ನೆಲಕ್ಕೆ ಉರುಳಿ ಬಿದ್ದಿದೆ.
ಘಟನಾ ಸ್ಥಳದಲ್ಲಿ ಸುಮಾರು 6 ರಿಂದ 7 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ಪೈಕಿ ಮೂವರು ಅಥವಾ ನಾಲ್ವರು ಕಾರ್ಮಿಕರು ಕ್ರೇನ್‌ನ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಘಟನೆ ನಡೆದ ತಕ್ಷಣವೇ ಸ್ಥಳೀಯರು ಮತ್ತು ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಈವರೆಗೆ ಒಬ್ಬ ಕಾರ್ಮಿಕನನ್ನು ಕ್ರೇನ್‌ನಡಿಯಿಂದ ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಉಳಿದವರನ್ನು ರಕ್ಷಿಸಲು ತೀವ್ರ ಕಾರ್ಯಾಚರಣೆ ಮುಂದುವರಿದಿದೆ. ಈ ದುರ್ಘಟನೆಯು ಸ್ಥಳದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.








