ಉಜ್ಜಯಿನಿ (ಮಧ್ಯಪ್ರದೇಶ): ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದಾಗ, ತಮ್ಮ ಸ್ವಂತ ಊರಿಗೆ ಮರಳಲು ಸಿದ್ಧರಾಗಿದ್ದ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ನಿವಾಸಿ ಮನ್ಸೂರ್ ಅಹ್ಮದ್ (55) ಅವರು ದುರದೃಷ್ಟವಶಾತ್ ಸಾವನ್ನಪ್ಪಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದ ತೀವ್ರತೆಯು ಇದೀಗ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುವ ನಾಗರಿಕರ ಪ್ರಾಣಕ್ಕೆ ಕುತ್ತು ತಂದಿದೆ.
ಮನ್ಸೂರ್ ಅಹ್ಮದ್ ಅವರು ಜೂನ್ 8 ರಂದು ರತ್ಲಾಮ್ ಜಿಲ್ಲೆಯಲ್ಲಿ ನಡೆಯಲಿರುವ ತಮ್ಮ ಸೋದರಳಿಯನ ಮದುವೆಯಲ್ಲಿ ಭಾಗವಹಿಸಲು ಸಿದ್ಧರಾಗಿದ್ದರು. ಬುಧವಾರ ರಾತ್ರಿ 7:30 ರ ಸುಮಾರಿಗೆ ಕುವೈತ್‌ನಿಂದ ಮುಂಬೈಗೆ ವಿಮಾನ ಏರಬೇಕಿತ್ತು, ಅಲ್ಲಿಂದ ರೈಲಿನಲ್ಲಿ ತಮ್ಮ ಕುಟುಂಬವನ್ನು ಸೇರಲು ಯೋಜಿಸಿದ್ದರು. ಅವರ ಕುಟುಂಬವು ರೈಲು ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಳ್ಳಲು ಕಾತರದಿಂದ ಕಾಯುತ್ತಿತ್ತು.
ಕಳೆದ 30 ವರ್ಷಗಳಿಂದ ಕುವೈತ್‌ನಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಅಹ್ಮದ್, ಮಂಗಳವಾರ ತಮ್ಮ 18 ವರ್ಷದ ಮಗ ಅನಸ್ ಅಹ್ಮದ್ ಅವರೊಂದಿಗೆ ಮಾತನಾಡಿದ್ದರು. ಆದರೆ ಆ ಮಾತುಕತೆಯೇ ತಂದೆಯೊಂದಿಗೆ ನಡೆದ ಕೊನೆಯ ಸಂಭಾಷಣೆಯಾಗುತ್ತದೆ ಎಂಬ ಕಲ್ಪನೆ ಆ ಮಗನಿಗೆ ಇರಲಿಲ್ಲ.
ಮನ್ಸೂರ್ ಅಹ್ಮದ್ ಅವರು ಪತ್ನಿ, ಒಬ್ಬ ಮಗ, ಇಬ್ಬರು ಪುತ್ರಿಯರು ಮತ್ತು ತಾಯಿಯನ್ನು ಅಗಲಿದ್ದಾರೆ.
ಮನ್ಸೂರ್ ಅಹ್ಮದ್ ಅವರ ಭಾವ ಮೊಹಮ್ಮದ್ ಇಸ್ಮಾಯಿಲ್ ಅವರು ಪಿಟಿಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದಂತೆ, ಸರ್ಕಾರಿ ಅಧಿಕಾರಿಗಳು ಅಹ್ಮದ್ ಅವರ ಸಾವಿನ ಸುದ್ದಿಯನ್ನು ಕುಟುಂಬಕ್ಕೆ ತಿಳಿಸಿದ್ದಾರೆ. ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರುವ ಕುರಿತಾದ ಪ್ರಕ್ರಿಯೆಗಳು ನಡೆಯುತ್ತಿವೆ.








