ನವದೆಹಲಿ: ದೆಹಲಿಯ ಮಾಳವೀಯ ನಗರದ ಹೋಟೆಲ್ ಒಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 21 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 12 ಮಂದಿ ವಿದೇಶಿ ಪ್ರಜೆಗಳಾಗಿದ್ದು, ಸಾವಿನ ಅಂಚಿನಲ್ಲೂ ಮನುಷ್ಯತ್ವ ಮತ್ತು ಪ್ರೀತಿಯ ದೃಶ್ಯಗಳು ಕಂಡುಬಂದಿವೆ.
ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಮೊಹಮ್ಮದ್ ಶೋಯೆಬ್ ಪ್ರಕಾರ, ಹೋಟೆಲ್‌ನ ಶೌಚಾಲಯವೊಂದು ಒಳಗಿನಿಂದ ಲಾಕ್ ಆಗಿತ್ತು. ಅದನ್ನು ಒಡೆದು ನೋಡಿದಾಗ, ದಂಪತಿಯೊಂದು ಪರಸ್ಪರ ತಬ್ಬಿಕೊಂಡ ಸ್ಥಿತಿಯಲ್ಲಿ ಪತ್ತೆಯಾದರು. ಪತ್ನಿ ಶೌಚಾಲಯದ ಸೀಟಿನ ಮೇಲೆ ಕುಳಿತಿದ್ದರೆ, ಪತಿ ಪಕ್ಕದ ಕುರ್ಚಿಯಲ್ಲಿ ಕುಳಿತು ಅವಳನ್ನು ಬಿಗಿಯಾಗಿ ಅಪ್ಪಿಕೊಂಡಿದ್ದನು. ಇವರು ಬೆಂಕಿಯಿಂದ ತಪ್ಪಿಸಿಕೊಳ್ಳಲು ಅಲ್ಲಿ ಅಡಗಿಕೊಂಡಿದ್ದು, ಅಂತಿಮವಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಮೃತಪಟ್ಟವರು ಬೆಂಕಿಯಿಂದಲ್ಲ, ಬದಲಾಗಿ ಅತಿಯಾದ ಹೊಗೆಯನ್ನು ಸೇವಿಸಿದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಹೊಗೆಯ ಕಾರಣದಿಂದ ಅವರ ದೇಹಗಳು ಕಪ್ಪಗಾಗಿದ್ದವು.ಮೊಹಮ್ಮದ್ ಶೋಯೆಬ್, ಮೊಹಮ್ಮದ್ ಅಫ್ಜಲ್ ಖಾನ್, ವಸೀಮ್ ರಾಜಾ ಸೇರಿದಂತೆ ಹಲವು ಸ್ಥಳೀಯರು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಬೆಂಕಿಯ ಮಧ್ಯೆ ನುಗ್ಗಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಹೋಟೆಲ್‌ನ ಬೇಸ್‌ಮೆಂಟ್‌ನಲ್ಲಿ ದೇಹಗಳು ಸಂಪೂರ್ಣವಾಗಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ. ಚಕ್ರಕುರ್ಚಿಯಲ್ಲಿ (Wheelchair) ಇದ್ದ ವ್ಯಕ್ತಿಯೊಬ್ಬರು ಸುಟ್ಟು ಕರಕಲಾಗಿದ್ದ ದೃಶ್ಯವನ್ನು ಅಶ್ರಫ್ ಖಾನ್ ಎಂಬ ರಕ್ಷಕರು ವಿವರಿಸಿದ್ದಾರೆ.
ರಿಯಾಸುದ್ದೀನ್ ಮನ್ಸೂರಿ ಮತ್ತು ಅವರ ಮಗ ಅರ್ಮಾನ್, ಹೋಟೆಲ್‌ನ ಹೊರಭಾಗದಲ್ಲಿ 20-22 ಹಾಸಿಗೆಗಳನ್ನು ಹಾಸಿ, ಕಿಟಕಿಯಿಂದ ಜಿಗಿದು ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದವರಿಗೆ ಆಸರೆಯಾದರು.
ಮೇ 3 ರಂದು ಬೆಳಿಗ್ಗೆ 8:30 ಸುಮಾರಿಗೆ ಹೋಟೆಲ್‌ನ ಬೇಸ್‌ಮೆಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ.
ಅಕ್ರಮ ಕಾರ್ಯಾಚರಣೆ: ಕೇವಲ 6 ಕೊಠಡಿಗಳಿಗೆ ಅನುಮತಿ ಪಡೆದಿದ್ದ ಹೋಟೆಲ್ ಮಾಲೀಕ ಲವಕೇಶ್ ಬಜಾಜ್, 25 ಕೊಠಡಿಗಳನ್ನು ಅಕ್ರಮವಾಗಿ ನಡೆಸುತ್ತಿದ್ದರು. ಹೋಟೆಲ್‌ನಲ್ಲಿ ಅಗ್ನಿಶಮನ ಪ್ರಮಾಣಪತ್ರ (NOC) ಇರಲಿಲ್ಲ, ಕಿಟಕಿಗಳನ್ನು ಮುಚ್ಚಲಾಗಿತ್ತು ಮತ್ತು ಒಂದೇ ಒಂದು ಪ್ರವೇಶ-ನಿರ್ಗಮನ ದ್ವಾರವಿದ್ದದ್ದು ಸಾವಿನ ಸಂಖ್ಯೆ ಹೆಚ್ಚಲು ಕಾರಣವಾಯಿತು.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಹೋಟೆಲ್ ಮಾಲೀಕ ಲವಕೇಶ್ ಬಜಾಜ್‌ರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ತಾನು ಭಯದಿಂದ ಸ್ಥಳದಿಂದ ಓಡಿಹೋಗಿದ್ದಾಗಿ ಒಪ್ಪಿಕೊಂಡಿದ್ದಾನೆ.








