ಶಿವಮೊಗ್ಗ: ವಿದ್ಯುತ್ ಕಂಪನಿಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ನೀತಿಯನ್ನು ಖಂಡಿಸಿ ಶನಿವಾರ ವಿದ್ಯುತ್ ಖಾಸಗೀಕರಣ ವಿರೋಧಿ ಹೋರಾಟ ಸಮಿತಿ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಇಂದು ಶಿವಮೊಗ್ಗದ ಸಾಗರದಲ್ಲಿ ಮೆಸ್ಕಾಂ (MESCOM) ಕಚೇರಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಬಳಿಕ ಉಪವಿಭಾಗಾಧಿಕಾರಿಗಳ ಕಚೇರಿಯ ಮೂಲಕ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಟಾಟಾ ಪವರ್‌ಗೆ ವಹಿಸುವ ಆತಂಕ: ಎಚ್.ಎಲ್. ಶ್ರೀಧರ್
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ ಮಾಜಿ ಉಪಾಧ್ಯಕ್ಷರಾದ ಎಚ್.ಎಲ್. ಶ್ರೀಧರ್, “ವಿದ್ಯುತ್ ಕಂಪನಿಗಳ ಖಾಸಗೀಕರಣದಿಂದ ಗ್ರಾಹಕರ ಶೋಷಣೆಯಾಗಲಿದೆ. ಹಿಂದೆ ನಾವು ನಡೆಸಿದ ಪ್ರತಿಭಟನೆಗೆ ಮಣಿದು ವಿದ್ಯುತ್ ನೀತಿ ಬದಲಿಸುವ ಭರವಸೆ ನೀಡಲಾಗಿತ್ತು. ಆದರೆ, ಈಗ ರಾಜ್ಯದ 19 ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ಜವಾಬ್ದಾರಿಯನ್ನು ‘ಟಾಟಾ ಪವರ್’ ಕಂಪನಿಗೆ ನೀಡಲು ತಯಾರಿ ನಡೆಸುತ್ತಿರುವುದು ಖಂಡನೀಯ. ಈಗಾಗಲೇ ಐದು ರಾಜ್ಯಗಳಲ್ಲಿ ಖಾಸಗೀಕರಣದಿಂದ ಗ್ರಾಹಕರಿಗೆ ಸೂಕ್ತ ಸೇವೆ ಸಿಗುತ್ತಿಲ್ಲ ಎಂಬ ದೂರುಗಳಿವೆ. ಸಾಗರ ತಾಲೂಕಿನಿಂದಲೇ ಖಾಸಗೀಕರಣದ ವಿರುದ್ಧ 10 ಸಾವಿರಕ್ಕೂ ಹೆಚ್ಚು ಆಕ್ಷೇಪಣೆಗಳನ್ನು ಸಲ್ಲಿಸಲಾಗುವುದು” ಎಂದು ಎಚ್ಚರಿಸಿದರು.

ಬಂಡವಾಳಶಾಹಿಗಳಿಗೆ ಮಣೆ: ತೀ.ನ. ಶ್ರೀನಿವಾಸ್
ಮಲೆನಾಡು ರೈತ ಹೋರಾಟ ವೇದಿಕೆಯ ಸಂಚಾಲಕ ತೀ.ನ. ಶ್ರೀನಿವಾಸ್ ಮಾತನಾಡಿ, “ದೇಶದಲ್ಲೇ ಅತ್ಯುತ್ತಮ ವಿದ್ಯುತ್ ಸೇವೆ ನೀಡುತ್ತಿರುವ ಹೆಗ್ಗಳಿಕೆ ನಮ್ಮ ರಾಜ್ಯದ ಕಂಪನಿಗಳಿಗಿದೆ. ಆದರೆ ಸರ್ಕಾರ ಬಂಡವಾಳಶಾಹಿಗಳ ಹಿತಾಸಕ್ತಿಗಾಗಿ ಈ ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸಲು ಮುಂದಾಗಿದೆ. ನೌಕರರ ಹೋರಾಟವನ್ನು ಹತ್ತಿಕ್ಕುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಜೂನ್ 23ರಂದು ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಕೊನೆಯ ಅವಕಾಶವಿದ್ದು, ಗ್ರಾಹಕರೆಲ್ಲರೂ ತಮ್ಮ ವಿರೋಧ ದಾಖಲಿಸಬೇಕು” ಎಂದು ಕರೆ ನೀಡಿದರು.
ಅವಧಿ ವಿಸ್ತರಣೆಗೆ ಹಿತಕರ ಜೈನ್ ಆಗ್ರಹ
ಹೋರಾಟ ಸಮಿತಿಯ ಸಂಚಾಲಕ ಹಿತಕರ ಜೈನ್ ಮಾತನಾಡಿ, “ಖಾಸಗಿ ಕಂಪನಿಗಳಿಂದ ಗ್ರಾಹಕಸ್ನೇಹಿ ಸೇವೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು ವಿದ್ಯುತ್ ವ್ಯವಸ್ಥೆಯನ್ನು ಖಾಸಗೀಕರಣ ಮಾಡುವುದಿಲ್ಲ ಎಂದು ಜನರಿಗೆ ವಾಗ್ದಾನ ನೀಡಬೇಕು. ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸುವ ದಿನಾಂಕವನ್ನು ಜುಲೈ 30ರವರೆಗೆ ವಿಸ್ತರಿಸಬೇಕು” ಎಂದು ಒತ್ತಾಯಿಸಿದರು.
ಪ್ರಮುಖರ ಉಪಸ್ಥಿತಿ: ಈ ಬೃಹತ್ ಪ್ರತಿಭಟನೆಯಲ್ಲಿ ಪ್ರಮುಖ ನಾಯಕರಾದ ಬಿ.ಎ. ಇಂದೂಧರ ಬೇಸೂರು, ಕುಮಾರಸ್ವಾಮಿ ಕೊಪ್ಪ, ಮಲ್ಲಿಕಾರ್ಜುನ ಹಕ್ರೆ, ಫ್ರಾನ್ಸಿಸ್ ಗೋಮ್ಸ್, ಕಲಸೆ ಚಂದ್ರಪ್ಪ, ಮನೋಜ್ ಕುಗ್ವೆ, ವಸೀಂ ಉಳ್ಳೂರು, ವೆಂಕಟೇಶ್ ಮೆಳವರಿಗೆ, ದಿನೇಶ್ ಶಿರವಾಳ, ರಮೇಶ್ ಕೆಳದಿ, ದಿನೇಶ್ ಸಿರಿವಾಳ, ಪರಮೇಶ್ವರ ದೂಗೂರು, ಸುರೇಂದ್ರ ಸೇರಿದಂತೆ ನೂರಾರು ಹೋರಾಟಗಾರರು ಭಾಗವಹಿಸಿದ್ದರು.
UGCET-2026: ಕೆಇಎಯಿಂದ ಮೊದಲ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ; ಇಂದಿನಿಂದಲೇ ಆಪ್ಷನ್ ಎಂಟ್ರಿ ಆರಂಭ








