ನವದೆಹಲಿ: ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿರುವ ನೀಟ್ (NEET) ಪರೀಕ್ಷೆ ಅಕ್ರಮ ಹಾಗೂ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಇಂದು ಶನಿವಾರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರು ಭಾರಿ ಪ್ರತಿಭಟನೆ ನಡೆಸಿದ್ದಾರೆ. ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನೇತೃತ್ವದಲ್ಲಿ ನಡೆದ ಈ ವಿಶಿಷ್ಟ ಪ್ರತಿಭಟನೆಯಲ್ಲಿ ನೂರಾರು ಯುವಕರು ತಟ್ಟೆ ಮತ್ತು ಚಮಚಗಳನ್ನು ಬಡಿಯುತ್ತಾ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಪ್ರತಿಭಟನಾಕಾರರು ಜಂತರ್ ಮಂತರ್‌ನಲ್ಲಿ ಮಧ್ಯಾಹ್ನ 1 ಗಂಟೆಗೆ ಸರಿಯಾಗಿ ಜಮಾಯಿಸಿ ಏಕಕಾಲದಲ್ಲಿ ತಟ್ಟೆ ಹಾಗೂ ಚಮಚಗಳನ್ನು ಜೋರಾಗಿ ಬಡಿಯಲು ಆರಂಭಿಸಿದರು. ಆ ಮೂಲಕ ಇಡೀ ಆವರಣದಲ್ಲಿ “ಗೋ ಪ್ರಧಾನ್ ಗೋ” (ಧರ್ಮೇಂದ್ರ ಪ್ರಧಾನ್ ಅವರೇ ರಾಜೀನಾಮೆ ಕೊಟ್ಟು ತೊಲಗಿ) ಎಂಬ ಘೋಷಣೆಗಳು ಮೊಳಗಿದವು. ಈ ಹಿಂದೆ ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ತಟ್ಟೆ-ಜಾಗಟೆ ಬಡಿಯಲು ಕರೆ ನೀಡಿದ್ದನ್ನು ನೆನಪಿಸುವಂತೆ, ವಿದ್ಯಾರ್ಥಿಗಳು ಅದೇ ತಂತ್ರವನ್ನು ಈಗ ಸರ್ಕಾರದ ವಿರುದ್ಧವೇ ಪ್ರತಿಭಟನಾ ಅಸ್ತ್ರವಾಗಿ ಬಳಸಿರುವುದು ವಿಶೇಷವಾಗಿತ್ತು. ದೆಹಲಿ ಮಾತ್ರವಲ್ಲದೆ ಪುಣೆ, ಲಕ್ನೋ, ಅಮೃತಸರ, ಬೆಂಗಳೂರು, ಹೈದರಾಬಾದ್ ಮತ್ತು ಜೈಪುರಗಳಲ್ಲೂ ಇಂತಹದೇ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸಿಜೆಪಿ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಶುಕ್ರವಾರವೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದು, ವಿದ್ಯಾರ್ಥಿಗಳ ಭವಿಷ್ಯದ ಕುರಿತು ಸರ್ಕಾರ ಉತ್ತರದಾಯಿಯಾಗಬೇಕು ಎಂದು ಒತ್ತಾಯಿಸಿದ್ದಾರೆ:
ಸಚಿವರ ಉಚ್ಚಾಟನೆ: ಪೇಪರ್ ಲೀಕ್ ಹಗರಣದ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು.
₹1 ಕೋಟಿ ಪರಿಹಾರ: ಇತ್ತೀಚಿನ ಪರೀಕ್ಷಾ ಅಕ್ರಮಗಳು ಮತ್ತು ಗೊಂದಲಗಳಿಂದಾಗಿ ಮನನೊಂದು ದೇಶಾದ್ಯಂತ ಸುಮಾರು 11 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ನೊಂದ ಕುಟುಂಬಗಳಿಗೆ ಕೇಂದ್ರ ಸರ್ಕಾರ ತಲಾ 1 ಕೋಟಿ ರೂಪಾಯಿ ಪರಿಹಾರ ಧನ ನೀಡಬೇಕು.
ಕಳೆದ ಜೂನ್ 6 ರಂದು ಜಂತರ್ ಮಂತರ್‌ನಲ್ಲಿ ನಡೆದ ಬೃಹತ್ ಸಮಾವೇಶದ ನಂತರ ಈ ಸಂಘಟನೆ ನಡೆಸಿದ ಎರಡನೇ ಅತಿ ದೊಡ್ಡ ಚಳುವಳಿ ಇದಾಗಿದೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಜಂತರ್ ಮಂತರ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು. “ಕಳೆದ ಒಂದು ತಿಂಗಳಿನಿಂದ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಿದ್ದಾರೆ. ನಮಗೆ ಕೇವಲ ಭರವಸೆಗಳು ಬೇಡ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಮತ್ತು ಹೊಣೆಗಾರಿಕೆ ಬೇಕು” ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.








