ಅಮೆರಿಕ ಮತ್ತು ಇರಾನ್ ದೇಶಗಳು ಶಾಂತಿ ಒಪ್ಪಂದವನ್ನು ಪ್ರಕಟಿಸಿದ ಬೆನ್ನಲ್ಲೇ ಸೋಮವಾರ (ಜೂನ್ 15) ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ತೀವ್ರ ಕುಸಿತ ಕಂಡಿವೆ. ಈ ಐತಿಹಾಸಿಕ ಒಪ್ಪಂದವು ತಿಂಗಳುಗಳಿಂದ ನಡೆಯುತ್ತಿದ್ದ ಸಂಘರ್ಷಕ್ಕೆ ಅಂತ್ಯ ಹಾಡಲಿದ್ದು, ವಿಶ್ವದ ಅತ್ಯಂತ ಪ್ರಮುಖ ಸಮುದ್ರ ವ್ಯಾಪಾರ ಮಾರ್ಗಗಳಲ್ಲಿ ಒಂದರ ಮೂಲಕ ಇಂಧನ ಪೂರೈಕೆಯನ್ನು ಮರುಸ್ಥಾಪಿಸಲಿದೆ.
ಮಿಲಿಟರಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ವಾಷಿಂಗ್ಟನ್ ಮತ್ತು ಟೆಹ್ರಾನ್ ಒಪ್ಪಿಕೊಂಡಿರುವ ಸುದ್ದಿಗೆ ವ್ಯಾಪಾರಿಗಳು ಸ್ಪಂದಿಸಿದ್ದರಿಂದ, ಏಷ್ಯಾದ ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ಪ್ರಮುಖ ‘ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್’ (WTI) ಕಚ್ಚಾ ತೈಲದ ಬೆಲೆ ಶೇಕಡಾ ನಾಲ್ಕಕ್ಕಿಂತಲೂ (4%) ಹೆಚ್ಚು ಕುಸಿದು, ಪ್ರತಿ ಬ್ಯಾರೆಲ್‌ಗೆ 81.15 ಡಾಲರ್‌ಗೆ ತಲುಪಿದೆ.
ಉಭಯ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸುತ್ತಿದ್ದ ಪಾಕಿಸ್ತಾನವು, ಲೆಬನಾನ್ ಸೇರಿದಂತೆ ಇಡೀ ಪ್ರದೇಶದಲ್ಲಿನ ಹಗೆತನಕ್ಕೆ “ತಕ್ಷಣದ ಮತ್ತು ಶಾಶ್ವತ” ಅಂತ್ಯ ಹಾಡಲು ಒಪ್ಪಂದಕ್ಕೆ ಬರಲಾಗಿದೆ ಎಂದು ಘೋಷಿಸಿದ ನಂತರ ಈ ಮಹತ್ವದ ಬೆಳವಣಿಗೆ ಸಾಧ್ಯವಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬೆಳವಣಿಗೆಯನ್ನು ತಕ್ಷಣವೇ ಖಚಿತಪಡಿಸಿದ್ದು, ಇರಾನ್ ಜೊತೆಗಿನ ಒಪ್ಪಂದ ಪೂರ್ಣಗೊಂಡಿದೆ ಎಂದು ಘೋಷಿಸಿದ್ದಾರೆ. ಅಲ್ಲದೆ, ವಿಶ್ವದ ಒಟ್ಟು ಕಚ್ಚಾ ತೈಲ ಪೂರೈಕೆಯ ಸುಮಾರು ಐದನೇ ಒಂದು ಭಾಗ ಹಾದುಹೋಗುವ ಕಿರಿದಾದ ಜಲಮಾರ್ಗವಾದ ‘ಹೊರ್ಮುಜ್ ಜಲಸಂಧಿ’ಯನ್ನು ಮರು-ಮುಕ್ತಗೊಳಿಸುವುದಾಗಿ ಪ್ರಕಟಿಸಿದ್ದಾರೆ.
”ನಾನು ಇಂದಿನಿಂದ ಹೊರ್ಮುಜ್ ಜಲಸಂಧಿಯನ್ನು ಯಾವುದೇ ಸುಂಕವಿಲ್ಲದೆ ಮುಕ್ತಗೊಳಿಸಲು ಪೂರ್ಣ ಅಧಿಕಾರ ನೀಡುತ್ತಿದ್ದೇನೆ ಮತ್ತು ಇದರೊಂದಿಗೆ ತಕ್ಷಣವೇ ಜಾರಿಗೆ ಬರುವಂತೆ ಅಮೆರಿಕ ನೌಕಾಪಡೆಯ ದಿಗ್ಬಂಧನವನ್ನು ಹಿಂಪಡೆಯಲು ಆದೇಶಿಸುತ್ತಿದ್ದೇನೆ. ವಿಶ್ವದ ಹಡಗುಗಳೇ, ನಿಮ್ಮ ಇಂಜಿನ್ ಸ್ಟಾರ್ಟ್ ಮಾಡಿ. ತೈಲವು ಮುಕ್ತವಾಗಿ ಹರಿಯಲಿ!” ಎಂದು ಟ್ರಂಪ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯುದ್ಧಕ್ಕೆ “ತಕ್ಷಣದ ಅಂತ್ಯ” ಎಂದು ಖಚಿತಪಡಿಸಿದ ಇರಾನ್
ಹೊಸದಾಗಿ ಘೋಷಿಸಲಾದ ಈ ಒಪ್ಪಂದವು ಉಭಯ ದೇಶಗಳ ನಡುವಿನ ಯುದ್ಧಕ್ಕೆ ತಕ್ಷಣದ ಅಂತ್ಯ ಹಾಡಿದೆ ಎಂದು ಇರಾನ್ ಹೇಳಿದೆ.
ಹೊರ್ಮುಜ್ ಜಲಸಂಧಿಯ ಮೂಲಕ ತೈಲ ಟ್ಯಾಂಕರ್‌ಗಳು ಮತ್ತೊಮ್ಮೆ ಮುಕ್ತವಾಗಿ ಸಂಚರಿಸಲಿವೆ ಎಂಬ ನಿರೀಕ್ಷೆಯು ಇಂಧನ ಮಾರುಕಟ್ಟೆಯ ದರಗಳು ತೀವ್ರವಾಗಿ ಕೆಳಗಿಳಿಯುವಂತೆ ಮಾಡಿದೆ. ಈ ಸಂಘರ್ಷ ಆರಂಭವಾದಾಗಿನಿಂದ, ಗಲ್ಫ್ ಪ್ರದೇಶದಲ್ಲಿ ತೈಲ ಪೂರೈಕೆಗೆ ಅಡ್ಡಿಯಾಗಬಹುದು ಎಂಬ ಭೀತಿಯು ತೈಲ ಬೆಲೆಗಳನ್ನು ಗಗನಕ್ಕೇರಿಸಿತ್ತು. ಅಲ್ಲದೆ ಜಾಗತಿಕವಾಗಿ ಹಣದುಬ್ಬರ, ಹಡಗು ಸಾಗಣೆ ವೆಚ್ಚ ಮತ್ತು ಜಾಗತಿಕ ಆರ್ಥಿಕ ಪ್ರಗತಿಯ ಕುರಿತು ತೀವ್ರ ಆತಂಕವನ್ನು ಮೂಡಿಸಿತ್ತು.








