ಬೈರೂತ್/ಟೆಹ್ರಾನ್:ಅಮೆರಿಕ ಮತ್ತು ಇರಾನ್ ನಡುವೆ ತಿಂಗಳುಗಳಿಂದ ನಡೆಯುತ್ತಿದ್ದ ಸಂಘರ್ಷಕ್ಕೆ ಮುಕ್ತಾಯ ಹಾಡಲು ಜಾಗತಿಕ ಮಟ್ಟದಲ್ಲಿ ‘ಶಾಂತಿ ಒಪ್ಪಂದ’ (Peace Deal) ಬಹುತೇಕ ಖಚಿತಗೊಳ್ಳುತ್ತಿರುವ ಸಮಯದಲ್ಲೇ ಇಸ್ರೇಲ್ ಮಿಲಿಟರಿ ಮತ್ತೊಂದು ಸಾಹಸಕ್ಕೆ ಕೈಹಾಕಿದೆ. ಲೆಬನಾನ್ ರಾಜಧಾನಿ ಬೈರೂತ್‌ನ ದಕ್ಷಿಣ ಉಪನಗರದಲ್ಲಿರುವ (ದಹಿಯೆಹ್ – Dahiyeh) ಇರಾನ್ ಬೆಂಬಲಿತ ಹಿಜ್ಬುಲ್ಲಾ ಉಗ್ರರ ಪ್ರಮುಖ ಕಮಾಂಡ್ ಸೆಂಟರ್‌ಗಳ ಮೇಲೆ ಇಸ್ರೇಲ್ ಭೀಕರ ವೈಮಾನಿಕ ದಾಳಿ ನಡೆಸಿದೆ.
ಐದು ಮಹಡಿಗಳ ವಸತಿ ಸಂಕೀರ್ಣದ ಮೇಲೆ ನಡೆದ ಈ ನಿಖರ ಕ್ಷಿಪಣಿ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, “ಉತ್ತರ ಇಸ್ರೇಲ್‌ನ ನಾಗರಿಕ ವಸಾಹತುಗಳನ್ನು ಗುರಿಯಾಗಿಸಿ ಹಿಜ್ಬುಲ್ಲಾ ಉಗ್ರರು ನಡೆಸಿದ ರಾಕೆಟ್ ದಾಳಿಗೆ ಪ್ರತಿಯಾಗಿ ಈ ದಾಳಿ ಮಾಡಲಾಗಿದೆ. ನಮ್ಮ ಭೂಭಾಗದ ಮೇಲೆ ನಡೆಯುವ ಯಾವುದೇ ದಾಳಿಯನ್ನು ನಾವು ಸಹಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಧ್ಯಸ್ಥಿಕೆ ವಹಿಸಿರುವ ಕತಾರ್-ಪಾಕಿಸ್ತಾನ ದೇಶಗಳು ಯುಎಸ್-ಇರಾನ್ ಯುದ್ಧಕ್ಕೆ ಶಾಶ್ವತ ವಿರಾಮ ಹಾಡಲು ಒಪ್ಪಂದದ ಕರಡನ್ನು ಸಿದ್ಧಪಡಿಸಿರುವಾಗಲೇ ಈ ದಾಳಿ ನಡೆದಿರುವುದು ಜಾಗತಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ. ಇಸ್ರೇಲ್‌ನ ಈ ಕ್ರಮದಿಂದ ತೀವ್ರ ಆಕ್ರೋಶಗೊಂಡಿರುವ ಇರಾನ್‌ನ ಮುಖ್ಯ ಸಂಧಾನಕಾರ ಮೊಹಮ್ಮದ್ ಬಾಗೇರ್ ಘಾಲಿಬಾಫ್, “ಈ ದಾಳಿಯು ಅಮೆರಿಕಕ್ಕೆ ತನ್ನ ಬದ್ಧತೆಗಳನ್ನು ಈಡೇರಿಸುವ ಇಚ್ಛಾಶಕ್ತಿ ಅಥವಾ ಸಾಮರ್ಥ್ಯ ಇಲ್ಲದಿರುವುದನ್ನು ತೋರಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವಾಷಿಂಗ್ಟನ್ ಜೊತೆ ಶಾಂತಿ ಮಾತುಕತೆ ಮುಂದುವರಿಸುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದು ಅಸಮಾಧಾನ ಹೊರಹಾಕಿದ್ದಾರೆ.
ಮತ್ತೊಂದೆಡೆ, ಈ ದಾಳಿಯಿಂದ ಕೊಂಚ ತಡವಾದರೂ ಯುಎಸ್-ಇರಾನ್ ನಡುವಿನ ಐತಿಹಾಸಿಕ ಶಾಂತಿ ಒಪ್ಪಂದವು ಅಂತಿಮಗೊಂಡಿದ್ದು, ಶೀಘ್ರದಲ್ಲೇ ಉಭಯ ದೇಶಗಳು ಅಧಿಕೃತವಾಗಿ ಸಹಿ ಹಾಕಲಿವೆ ಎಂದು ವರದಿಗಳು ತಿಳಿಸಿವೆ.
ಶಾಂತಿ ಒಪ್ಪಂದದ ಅಂತಿಮ ಕ್ಷಣದಲ್ಲಿ ಇಸ್ರೇಲ್ ನಡೆಸಿದ ಈ ದಾಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಬೈರೂತ್ ಮೇಲಿನ ಇಸ್ರೇಲ್ ದಾಳಿ ಈ ಸಮಯದಲ್ಲಿ ನಡೆಯಬಾರದಾಗಿತ್ತು” ಎಂದು ಹೇಳಿರುವ ಅವರು, “ಮಧ್ಯಪ್ರಾಚ್ಯದಲ್ಲಿ ಸುಂದರವಾದ ಶಾಂತಿಯ ಆರಂಭಕ್ಕೆ ಇದು ಸಕಾಲ, ಯಾರೂ ಇದನ್ನು ಹಾಳು ಮಾಡಬೇಡಿ” ಎಂದು ಇಸ್ರೇಲ್ ಹಾಗೂ ಇರಾನ್ ಎರಡಕ್ಕೂ ಎಚ್ಚರಿಕೆ ನೀಡಿದ್ದಾರೆ.








