‘ಡಾನ್ 3′ ಚಿತ್ರದಿಂದ ರಣವೀರ್ ಸಿಂಗ್ ದಿಢೀರ್ ನಿರ್ಗಮನದಿಂದ ಉಂಟಾಗಿರುವ ವಿವಾದ ತಣ್ಣಗಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್ (FWICE) ನಟನ ವಿರುದ್ಧ ಕಠಿಣ ನಿಲುವು ತಳೆದಿದೆ. ಈಗ, ಈ ವಿವಾದದ ಕುರಿತು ನಟಿ ಮತ್ತು ರಾಜಕಾರಣಿ ಕಂಗನಾ ರನೌತ್ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ನಡೆದ ತಮ್ಮ ಮುಂಬರುವ ಚಿತ್ರ ‘ಭಾರತ್ ಭಾಗ್ಯ ವಿಧಾತ’ದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಕಂಗನಾ ಭಾಗವಹಿಸಿದ್ದರು. ಈ ವೇಳೆ ರಣವೀರ್ ಸಿಂಗ್ ಮೇಲಿನ ನಿಷೇಧದ ಬಗ್ಗೆ ಕೇಳಿದಾಗ, ಅವರು ನಗುತ್ತಲೇ, “ನೀವು ನನ್ನನ್ನೇ ಕೇಳುತ್ತಿದ್ದೀರಿ, ನನ್ನನ್ನು ಎಲ್ಲರೂ ನಿಷೇಧಿಸಿದ್ದಾರೆ! ಅದಕ್ಕೆ ನಾನು ಏನು ಹೇಳುತ್ತೇನೆಂದರೆ, ಯಾವಾಗ ಒಬ್ಬ ವ್ಯಕ್ತಿಯ ಘನತೆ ಅಥವಾ ಸಾಮರ್ಥ್ಯ (ಹೈಸಿಯತ್) ಹೆಚ್ಚಾಗುತ್ತದೆಯೋ, ಆಗ ಶತ್ರುಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಸಾಮರ್ಥ್ಯ ಹೆಚ್ಚಾಗಿದ್ದು ಶತ್ರುಗಳು ಇಲ್ಲದಿರಲು ಸಾಧ್ಯವಿಲ್ಲ. ಹಾಗಾಗಿ, ತನಗೆ ಇಷ್ಟೊಂದು ಶತ್ರುಗಳಿದ್ದಾರೆ ಎಂದರೆ ರಣವೀರ್ ಸಿಂಗ್ ಅಂದುಕೊಳ್ಳಬೇಕು ತಾನು ಎಷ್ಟು ಎತ್ತರಕ್ಕೆ ಬೆಳೆದಿದ್ದೇನೆ ಎಂದು! ಇದು ಒಳ್ಳೆಯದೇ… ಜೀವನದಲ್ಲಿ ಮುಂದೆ ಸಾಗುವಾಗ ಹಲವು ಅಡೆತಡೆಗಳು ಬರುತ್ತವೆ, ಯಾವಾಗಲೂ ಹಾದಿ ಸುಗಮವಾಗಿರಲು ಸಾಧ್ಯವಿಲ್ಲ. ನಾನು ಇವೆಲ್ಲವನ್ನು ತುಂಬಾ ಅನುಭವಿಸಿದ್ದೇನೆ, ಆದರೂ ನೋಡಿ, ಇಂದು ನಾನು ಚೆನ್ನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಬದುಕು ಚೆನ್ನಾಗಿ ಸಾಗುತ್ತಿದೆ. ಹಾಗಾಗಿ ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಕಿಲ್ಲ, ಅಂತಿಮವಾಗಿ ಎಲ್ಲವೂ ಸರಿಯಾಗುತ್ತದೆ,” ಎಂದರು.
ಫರ್ಹಾನ್ ಅಖ್ತರ್ ಅವರ ‘ಡಾನ್’ (2006) ಮತ್ತು ‘ಡಾನ್ 2’ (2011) ಚಿತ್ರಗಳಲ್ಲಿ ಶಾರುಖ್ ಖಾನ್ ನಟಿಸಿದ್ದರು. 2023ರಲ್ಲಿ ರಣವೀರ್ ಸಿಂಗ್ ಅವರು ‘ಡಾನ್ 3’ನಲ್ಲಿ ನಟಿಸಲಿದ್ದಾರೆ ಎಂದು ಘೋಷಿಸಲಾಗಿತ್ತು. ಆದರೆ ಡಿಸೆಂಬರ್ 2025ರಲ್ಲಿ, ನಿರ್ದೇಶಕ ಆದಿತ್ಯ ಧರ್ ಅವರೊಂದಿಗಿನ ‘ಧುರಂಧರ್’ ಚಿತ್ರದ ಯಶಸ್ಸಿನ ನಂತರ ರಣವೀರ್ ಚಿತ್ರದಿಂದ ದಿಢೀರ್ ಹೊರಬಂದಾಗ, ಅವರ ಮತ್ತು ಎಕ್ಸೆಲ್ ಎಂಟರ್ಟೈನ್ಮೆಂಟ್ನ ಫರ್ಹಾನ್ ಹಾಗೂ ರಿತೇಶ್ ಸಿಧ್ವಾನಿ ನಡುವಿನ ವಿವಾದ ಬೆಳಕಿಗೆ ಬಂತು. ಕಳೆದ ತಿಂಗಳು, ರಣವೀರ್ ಅವರ ನಿರ್ಗಮನದಿಂದ ತಮಗೆ 45 ಕೋಟಿ ರೂಪಾಯಿಗಳ ಆರ್ಥಿಕ ನಷ್ಟವಾಗಿದೆ ಎಂದು ಫರ್ಹಾನ್ FWICEಗೆ ದೂರು ನೀಡಿದರು. ರಣವೀರ್ ಬದಲಿಗೆ ಹೃತಿಕ್ ರೋಷನ್ ಅವರನ್ನು ಕರೆತರಲಾಗುತ್ತಿದೆ ಎಂಬ ಮಾತುಗಳೂ ಕೇಳಿಬಂದಿದ್ದವು, ಆದರೆ ಅದನ್ನು ನಂತರ ನಟ ನಿರಾಕರಿಸಿದರು.
ಏಪ್ರಿಲ್ನಲ್ಲಿ ಫರ್ಹಾನ್ ಅಖ್ತರ್ ಅವರು ದೂರು ನೀಡಿದ ನಂತರ, FWICE ರಣವೀರ್ ಸಿಂಗ್ ವಿರುದ್ಧ ಅಸಹಕಾರ ನಿರ್ದೇಶನವನ್ನು (non-cooperation directive) ಹೊರಡಿಸಿತು.
ಇದಕ್ಕೆ ಪ್ರತಿಕ್ರಿಯೆಯಾಗಿ, ರಣವೀರ್ ಸಿಂಗ್ ಪರವಾಗಿ ಅವರ ವಕ್ತಾರರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದರು. ಅದರಲ್ಲಿ, “ರಣವೀರ್ ಸಿಂಗ್ ಚಿತ್ರರಂಗ ಮತ್ತು ಡಾನ್ ಫ್ರಾಂಚೈಸಿ ಜತೆ ಸಂಬಂಧ ಹೊಂದಿರುವ ಪ್ರತಿಯೊಬ್ಬರಿಗೂ ಹೆಚ್ಚಿನ ಗೌರವ ನೀಡುತ್ತಾರೆ. ‘ಡಾನ್ 3’ ಸುತ್ತಮುತ್ತ ನಡೆದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅವರು ಮೌನ ವಹಿಸಲು ನಿರ್ಧರಿಸಿದ್ದಾರೆ. ವೃತ್ತಿಪರ ಚರ್ಚೆಗಳು ಮತ್ತು ವೈಯಕ್ತಿಕ ಸಂಬಂಧಗಳನ್ನು ಗೌರವ ಮತ್ತು ಪ್ರಬುದ್ಧತೆಯಿಂದ ನಿಭಾಯಿಸಬೇಕು ಎಂದು ಅವರು ನಂಬಿದ್ದಾರೆ” ಎಂದು ತಿಳಿಸಲಾಗಿತ್ತು. ಈ ವಿಷಯದ ಬಗ್ಗೆ ಇನ್ನು ಮುಂದೆ ಯಾವುದೇ ಪ್ರತಿಕ್ರಿಯೆ ನೀಡಲು ರಣವೀರ್ ಬಯಸುವುದಿಲ್ಲ ಎಂದು ವಕ್ತಾರರು ಸ್ಪಷ್ಟಪಡಿಸಿದರು.
ಏತನ್ಮಧ್ಯೆ, ಮನೋಜ್ ತಪಡಿಯಾ ಅವರ ನಿರ್ದೇಶನದಲ್ಲಿ, ಜಯಂತಿಲಾಲ್ ಗಡ ಮತ್ತು ಕಂಗನಾ ರನೌತ್ ನಿರ್ಮಾಣದಲ್ಲಿ ಮೂಡಿಬಂದಿರುವ ‘ಭಾರತ್ ಭಾಗ್ಯ ವಿಧಾತ’ ಚಿತ್ರವು ಜೂನ್ 12ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.








