ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ (DRDO) ಮತ್ತು ಭಾರತೀಯ ವಾಯುಪಡೆ (IAF) ವಾಯುಗಾಮಿ ವೇದಿಕೆಯಿಂದ ‘ರುದ್ರಮ್-II’ (RudraM-II) ವಾಯು-ಭೂ-ಮೇಲ್ಮೈ ಕ್ಷಿಪಣಿಯ ಯಶಸ್ವಿ ಪರೀಕ್ಷೆಯನ್ನು ನಡೆಸಿವೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಸಚಿವಾಲಯದ ಪ್ರಕಾರ, ಈ ಕ್ಷಿಪಣಿಯನ್ನು ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ಪರೀಕ್ಷಿಸಲಾಯಿತು. ಪರೀಕ್ಷೆಯ ಸಂದರ್ಭದಲ್ಲಿ ಹಾರಾಟದ ಪಥವು (trajectory) ಆನ್ಬೋರ್ಡ್ನಲ್ಲಿರುವ ಎಲ್ಲಾ ಸಬ್ಸಿಸ್ಟಮ್ಗಳ ಕಾರ್ಯಕ್ಷಮತೆ ಮತ್ತು ಸಾಮರ್ಥ್ಯವನ್ನು ದೃಢಪಡಿಸಿತು. ಉಡಾವಣೆಯ ನಂತರ ಕ್ಷಿಪಣಿಗಳನ್ನು ಮೊದಲೇ ನಿರ್ಧರಿಸಿದ ಗುರಿಯತ್ತ ಅತೀ ನಿಖರವಾಗಿ ಮಾರ್ಗದರ್ಶನ ಮಾಡಲಾಯಿತು. “ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR) ನಿಯೋಜಿಸಿದ ವಿವಿಧ ಉಪಕರಣಗಳಿಂದ ಸೆರೆಹಿಡಿಯಲಾದ ಫ್ಲೈಟ್ ಡೇಟಾದ ಮೂಲಕ ಪರೀಕ್ಷೆಯ ಎಲ್ಲಾ ಗುರಿಗಳು ಸಂಪೂರ್ಣವಾಗಿ ಈಡೇರಿವೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ರುದ್ರಮ್-II ಕ್ಷಿಪಣಿಯನ್ನು ಹೈದರಾಬಾದ್ನ ರಿಸರ್ಚ್ ಸೆಂಟರ್ ಇಮಾರತ್ ಸ್ವದೇಶಿಯಾಗಿ ಅಭಿವೃದ್ಧಿಪಡಿಸಿದೆ. ಈ ಯೋಜನೆಯಲ್ಲಿ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಲ್ಯಾಬೊರೇಟರಿ, ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೊರೇಟರಿ, ಆರ್ಮಮೆಂಟ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ ಮತ್ತು ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ಸೇರಿದಂತೆ ಇತರ DRDO ಸೌಲಭ್ಯಗಳು ಸಹಕರಿಸಿವೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL), ರೀಜನಲ್ ಸೆಂಟರ್ ಫಾರ್ ಮಿಲಿಟರಿ ಏರ್ವರ್ದಿನೆಸ್, ಮಿಸೈಲ್ ಸಿಸ್ಟಮ್ ಕ್ವಾಲಿಟಿ ಅಶ್ಯೂರೆನ್ಸ್ ಏಜೆನ್ಸಿ ಮತ್ತು ಇತರ ಕೈಗಾರಿಕಾ ಪಾಲುದಾರರು ಈ ಕಾರ್ಯಕ್ರಮಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ.
ಯಶಸ್ವಿ ಪರೀಕ್ಷೆಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು DRDO, ವಾಯುಪಡೆ, ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳು, ಕೈಗಾರಿಕಾ ಪಾಲುದಾರರು ಮತ್ತು ಅಭಿವೃದ್ಧಿ ಏಜೆನ್ಸಿಗಳನ್ನು ಅಭಿನಂದಿಸಿದ್ದಾರೆ. ಈ ಪರೀಕ್ಷೆಗಳು ಸ್ವದೇಶಿ ರಕ್ಷಣಾ ತಂತ್ರಜ್ಞಾನಗಳ ಬೆಳೆಯುತ್ತಿರುವ ಪ್ರಬುದ್ಧತೆಯನ್ನು ಪ್ರದರ್ಶಿಸಿವೆ ಮತ್ತು ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಗಳಲ್ಲಿ ‘ಆತ್ಮನಿರ್ಭರತೆ’ಗೆ ಗಮನಾರ್ಹ ಕೊಡುಗೆ ನೀಡಿವೆ ಎಂದು ಅವರು ಹೇಳಿದ್ದಾರೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತು DRDO ಅಧ್ಯಕ್ಷರಾದ ಸಮೀರ್ ವಿ. ಕಾಮತ್ ಅವರು ಈ ಶ್ಲಾಘನೀಯ ಸಾಧನೆಗಾಗಿ ಪರೀಕ್ಷೆಯೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ತಂಡಗಳನ್ನು ಅಭಿನಂದಿಸಿದ್ದಾರೆ.








