ಜಲಂಧರ್ (ಪಂಜಾಬ್):ಪಂಜಾಬ್‌ನ ಜಲಂಧರ್‌ನಲ್ಲಿರುವ ಬಿಎಸ್‌ಎಫ್ (BSF) ಪಂಜಾಬ್ ಫ್ರಾಂಟಿಯರ್ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಬುಧವಾರ ಪ್ರಬಲ ಸ್ಫೋಟ ಸಂಭವಿಸಿದ್ದು, ಇಡೀ ಪ್ರದೇಶದಲ್ಲಿ ಆತಂಕ ಮನೆಮಾಡಿದೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಕಟ್ಟಡಗಳ ಕಿಟಕಿ ಗಾಜುಗಳು ಪುಡಿಯಾಗಿದ್ದು, ಭದ್ರತಾ ಸಂಸ್ಥೆಗಳು ತಕ್ಷಣವೇ ಸ್ಥಳವನ್ನು ಸುತ್ತುವರೆದಿವೆ.
ಪ್ರಾಥಮಿಕ ವರದಿಗಳ ಪ್ರಕಾರ, ಇದು ಹೆಚ್ಚಿನ ತೀವ್ರತೆಯ (High Impact) ಸ್ಫೋಟವಾಗಿದ್ದು, ಸ್ಫೋಟದ ಸದ್ದು ಸುಮಾರು ಒಂದು ಕಿಲೋಮೀಟರ್ ದೂರದವರೆಗೆ ಕೇಳಿಸಿದೆ.ಘಟನಾ ಸ್ಥಳಕ್ಕೆ ಬಾಂಬ್ ಪತ್ತೆ ದಳ ಮತ್ತು ವಿಧಿವಿಜ್ಞಾನ ತಜ್ಞರು ಭೇಟಿ ನೀಡಿದ್ದು, ಸ್ಫೋಟಕಗಳ ಮಾದರಿಯನ್ನು ಸಂಗ್ರಹಿಸುತ್ತಿದ್ದಾರೆ. ಇದು ಭಯೋತ್ಪಾದಕ ಕೃತ್ಯವೇ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಬಿಎಸ್‌ಎಫ್ ಪ್ರಧಾನ ಕಚೇರಿ ಮತ್ತು ಸೇನಾ ನೆಲೆಗಳ ಮೇಲೆ ಸರಣಿ ದಾಳಿಯ ಭೀತಿ ಇರುವುದರಿಂದ ಪಂಜಾಬ್‌ನಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಗಡಿ ಭಾಗಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಸ್ಫೋಟದ ವೇಳೆ ಜನರು ಸ್ಥಳದಲ್ಲಿ ಇಲ್ಲದ ಕಾರಣ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ ಎಂದು ಹೇಳಲಾಗುತ್ತಿದೆ. ಆದರೂ, ಘಟನೆಯಲ್ಲಿ ಎಷ್ಟು ಹಾನಿಯಾಗಿದೆ ಎಂಬ ಬಗ್ಗೆ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಬೇಕಿದೆ.








