ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಸಿಎಂ ಡಿ.ಕೆ. ಶಿವಕುಮಾರ್ ಅವರು ವಿದ್ಯಾರ್ಥಿ ಸಮೂಹಕ್ಕೆ ಭರ್ಜರಿ ಕೊಡುಗೆ ನೀಡಿದ್ದಾರೆ. ರಾಜ್ಯದಾದ್ಯಂತ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ‘ಉಚಿತ ಬಸ್ ಪಾಸ್’ ಯೋಜನೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದು, ವಿದ್ಯಾರ್ಥಿ ವಲಯದಲ್ಲಿ ತೀವ್ರ ಹರ್ಷ ವ್ಯಕ್ತವಾಗಿದೆ. ಈ ಮಹತ್ವದ ಆದೇಶ ಹೊರಬಿದ್ದ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಸೇರಿದಂತೆ ಎಲ್ಲಾ ಸಾರಿಗೆ ಸಂಸ್ಥೆಗಳು ಉಚಿತ ಬಸ್ ಪಾಸ್ ವಿತರಣೆಗೆ ಚಾಲನೆ ನೀಡಿವೆ.
ರಾಜ್ಯ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಗೆ ನಿನ್ನೆಯಿಂದ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಉಚಿತ ಬಸ್ ಪಾಸ್ ವಿತರಣೆಯಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವತಿಯಿಂದ ನೀಡಲಾದ ಈ ಮೊದಲ ಉಚಿತ ಪಾಸ್ ಪಡೆದ ಕೀರ್ತಿಗೆ ರೋಹಿತ್ ಕುಮಾರ್ ಹೆಚ್. ಎಂ. ಎಂಬ ವಿದ್ಯಾರ್ಥಿ ಪಾತ್ರನಾಗಿದ್ದಾನೆ. ಈ ಮೂಲಕ ಇಡೀ ರಾಜ್ಯದಲ್ಲೇ ಉಚಿತ ಬಸ್ ಪಾಸ್ ಸೌಲಭ್ಯ ಪಡೆದ ಮೊದಲ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ರೋಹಿತ್ ಮುಡಿಗೇರಿಸಿಕೊಂಡಿದ್ದಾನೆ.
ಮೊದಲ ಪಾಸ್ ಪಡೆದ ವಿದ್ಯಾರ್ಥಿ ರೋಹಿತ್ ಕುಮಾರ್ ಬೆಂಗಳೂರಿನ ಅತ್ತಿಬೆಲೆ ಬಿಎಂಟಿಸಿ ಬಸ್ ನಿಲ್ದಾಣದ ಕೌಂಟರ್‌ನಲ್ಲಿ ತನ್ನ ಹೆಸರನ್ನು ನೋಂದಾಯಿಸಿಕೊಂಡು ಪಾಸ್ ಪಡೆದಿದ್ದಾನೆ. ಈತ ಹುಲಿಮಂಗಲದಿಂದ ಜಿಗಳಿ ಕ್ರಾಸ್ ವರೆಗೆ ಪ್ರತಿದಿನ ಪ್ರಯಾಣಿಸಲು ಈ ಉಚಿತ ಪಾಸ್ ವಿತರಿಸಲಾಗಿದೆ. ಪಾಸ್ ಕೈ ಸೇರಿದ ಕ್ಷಣದಲ್ಲಿ ವಿದ್ಯಾರ್ಥಿ ರೋಹಿತ್ ಕುಮಾರ್ ಮುಖದಲ್ಲಿ ಮಂದಹಾಸ ಎದ್ದು ಕಾಣುತ್ತಿತ್ತು.
ಸರ್ಕಾರ ನೀಡಿರುವ ಈ ಉಚಿತ ಬಸ್ ಪಾಸ್ ಕೇವಲ ಕೆಲವು ದಿನಗಳಿಗೆ ಸೀಮಿತವಾಗಿರದೆ, ಸುದೀರ್ಘ ಅವಧಿಗೆ ಮಾನ್ಯತೆ ಹೊಂದಿರಲಿದೆ. ವಿದ್ಯಾರ್ಥಿ ರೋಹಿತ್ ಕುಮಾರ್ ಪಡೆದಿರುವ ಈ ಉಚಿತ ಪಾಸ್ ಮುಂಬರುವ 31-03-2027 ರವರೆಗೂ ಚಾಲ್ತಿಯಲ್ಲಿರಲಿದೆ. ಅಂದರೆ ಅಲ್ಲಿಯವರೆಗೂ ಯಾವುದೇ ಆರ್ಥಿಕ ಹೊರೆಯಿಲ್ಲದೆ ಆತ ಶಾಲಾ-ಕಾಲೇಜಿಗೆ ಉಚಿತವಾಗಿ ಸಂಚಾರ ನಡೆಸಲು ಈ ಯೋಜನೆಯಡಿ ಸಂಪೂರ್ಣ ಅವಕಾಶ ಕಲ್ಪಿಸಿಕೊಡಲಾಗಿದೆ.
ಮುಖ್ಯಮಂತ್ರಿಗಳ ಈ ದಿಟ್ಟ ನಿರ್ಧಾರಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ದಿನೇ ದಿನೇ ಹೆಚ್ಚುತ್ತಿರುವ ಶಿಕ್ಷಣದ ವೆಚ್ಚ ಹಾಗೂ ಪ್ರಯಾಣ ಭತ್ಯೆಯ ಮಧ್ಯೆ, ಸರ್ಕಾರದ ಈ ಉಚಿತ ಬಸ್ ಪಾಸ್ ಯೋಜನೆ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಹೊರೆಯನ್ನು ಗಣನೀಯವಾಗಿ ತಗ್ಗಿಸಲಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ಪ್ರತಿಯೊಬ್ಬ ಅರ್ಹ ವಿದ್ಯಾರ್ಥಿಗೂ ಈ ಸೌಲಭ್ಯ ತಲುಪಿಸಲು ಸಾರಿಗೆ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.








