ಬೆಳ್ತಂಗಡಿ: ಧರ್ಮಸ್ಥಳದ ಬುರುಡೆ ಪ್ರಕರಣದ ತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ತಂಡದ (SIT) ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಚಾರ್ಮಾಡಿ ಬಳಿ ನಡೆದಿದೆ.
ಅಪಘಾತದಲ್ಲಿ ಎಸ್‌ಐಟಿ ಎಸ್‌ಪಿ ಸಿ.ಎ. ಸೈಮನ್, ಇನ್ಸ್‌ಪೆಕ್ಟರ್ ಕುಸುಮಾಧರ್, ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣದ ಚರ್ಚೆಗೆ ತೆರಳುತ್ತಿದ್ದಾಗ ಅಪಘಾತ:
ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ಧರ್ಮಸ್ಥಳದ ಬುರುಡೆ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚನೆ ಮಾಡಲಾಗಿತ್ತು. ಈ ಕೇಸ್‌ಗೆ ಸಂಬಂಧಿಸಿದಂತೆ ಪ್ರಮುಖ ಚರ್ಚೆ ಹಾಗೂ ತನಿಖಾ ಪ್ರಕ್ರಿಯೆಗಾಗಿ ಎಸ್‌ಐಟಿ ಅಧಿಕಾರಿಗಳ ತಂಡ ಕಾರಿನಲ್ಲಿ ತೆರಳುತ್ತಿತ್ತು. ಈ ವೇಳೆ ಚಾರ್ಮಾಡಿ ಘಾಟ್ ಪ್ರದೇಶದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯಲ್ಲೇ ಪಲ್ಟಿಯಾಗಿದೆ.
ಸ್ಥಳೀಯರ ನೆರವು:
ಘಟನೆ ನಡೆದ ತಕ್ಷಣ ಸ್ಥಳೀಯರು ಹಾಗೂ ಹತ್ತಿರದಲ್ಲಿದ್ದ ಸಾರ್ವಜನಿಕರು ಧಾವಿಸಿ ಬಂದು ಕಾರಿನಲ್ಲಿದ್ದ ಅಧಿಕಾರಿಗಳನ್ನು ಹೊರತೆಗೆಯಲು ನೆರವಾಗಿದ್ದಾರೆ. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಎಲ್ಲರೂ ಸುರಕ್ಷಿತವಾಗಿದ್ದಾರೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದಲ್ಲೊಂದು ಅಚ್ಚರಿಯ ಘಟನೆ; ಸಾಯುವ ಸ್ಥಿತಿಯಲ್ಲಿದ್ದ ಗರ್ಭಿಣಿ ಎಮ್ಮೆಯನ್ನು ಬದುಕಿಸಿದ ಪಶು ವೈದ್ಯ!








