ಬೆಂಗಳೂರು: “ಕೇವಲ ಪ್ರಚಾರ ಮತ್ತು ವ್ಯೂಸ್ ಗಳಿಸುವುದಕ್ಕಾಗಿ ಜೀವಂತ ಇರುವವರ ಸಾವಿನ ಸುಳ್ಳು ಸುದ್ದಿ ಬಿತ್ತರಿಸುವ ಮುಖೇಡಿಗಳ ಹೆಡೆಮುರಿ ಕಟ್ಟಿ ತಕ್ಷಣವೇ ಪರಪ್ಪನ ಅಗ್ರಹಾರ ಜೈಲಿಗೆ ಅಟ್ಟಬೇಕು” ಎಂದು ಸ್ಯಾಂಡಲ್ವುಡ್ನ ಹಿರಿಯ ಪೋಷಕ ನಟ ದೊಡ್ಡಣ್ಣ ಸಿಡಿದೆದ್ದಿದ್ದಾರೆ. ತಮ್ಮ ನಿಧನದ ಕುರಿತು ರಾಜ್ಯ ಮಟ್ಟದಲ್ಲಿ ಸುಳ್ಳು ವದಂತಿ ಹರಡಿದ್ದ ಕಿಡಿಗೇಡಿಗಳ ವಿರುದ್ಧ ಅವರು ಬೆಂಗಳೂರಿನ ಸೈಬರ್ ಕ್ರೈಂ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ನಟ ದೊಡ್ಡಣ್ಣ ಅವರು ವಿಧಿವಶರಾಗಿದ್ದಾರೆ ಎಂಬ ಸುಳ್ಳು ಪೋಸ್ಟ್ಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು. ಇದರಿಂದ ಆತಂಕಗೊಂಡ ನೂರಾರು ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ದೊಡ್ಡಣ್ಣ ಅವರಿಗೆ ಸತತ ಫೋನ್ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು.
ಅಂದೇ ವಿಡಿಯೋ ಬಿಡುಗಡೆ ಮಾಡಿದ್ದ ಹಿರಿಯ ನಟ:
ತಮ್ಮ ಸಾವಿನ ಸುಳ್ಳು ವಾರ್ತೆ ಹರಿದಾಡಿದ ದಿನವೇ ಸಾಮಾಜಿಕ ಮಾಧ್ಯಮಗಳ ಮೂಲಕ ವಿಡಿಯೋ ಸಂದೇಶ ರವಾನಿಸಿದ್ದ ದೊಡ್ಡಣ್ಣ, “ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ, ಯಾರೂ ಆತಂಕ ಪಡಬೇಡಿ” ಎಂದು ಸ್ಪಷ್ಟನೆ ನೀಡಿದ್ದರು. ಜೊತೆಗೆ ಈ ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು. ಅದರಂತೆ ಈಗ ಸೈಬರ್ ಪೊಲೀಸ್ ಕಚೇರಿಗೆ ಭೇಟಿ ನೀಡಿ ಲಿಖಿತ ದೂರು ದಾಖಲಿಸಿದ್ದಾರೆ.
ಸೈಬರ್ ಪೊಲೀಸರಿಂದ ಆರೋಪಿಗಳ ಪತ್ತೆಗೆ ತೀವ್ರ ಶೋಧ:
ಹಿರಿಯ ಕಲಾವಿದನ ದೂರಿಗೆ ತಕ್ಷಣವೇ ಸ್ಪಂದಿಸಿರುವ ಸೈಬರ್ ಕ್ರೈಂ ಪೊಲೀಸರು ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ದೊಡ್ಡಣ್ಣ ಅವರ ಹೆಸರಿಗೆ ಮಸಿ ಬಳಿಯಲು ಯತ್ನಿಸಿದ ಹಾಗೂ ಸುಳ್ಳು ಮಾಹಿತಿ ತೇಲಿಬಿಟ್ಟ ಯೂಟ್ಯೂಬ್ ಚಾನೆಲ್ಗಳು ಮತ್ತು ಸೋಶಿಯಲ್ ಮೀಡಿಯಾ ಪ್ರೊಫೈಲ್ಗಳ ಡಿಜಿಟಲ್ ಹೆಜ್ಜೆಗುರುತುಗಳನ್ನು (IP Address) ಪತ್ತೆಹಚ್ಚಲಾಗುತ್ತಿದ್ದು, ಕಿಡಿಗೇಡಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಡಿಜಿಟಲ್ ಲೋಕದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಸುಳ್ಳು ಸುದ್ದಿಗಳ ಹಾವಳಿ ಮಿತಿಮೀರುತ್ತಿದ್ದು, ಸೆಲೆಬ್ರಿಟಿಗಳ ಜೀವದ ಜೊತೆ ಆಟವಾಡುವ ಇಂತಹ ಪ್ರವೃತ್ತಿಗೆ ದೊಡ್ಡಣ್ಣ ಅವರು ನೀಡಿರುವ ಈ ಕಾನೂನುಬದ್ಧ ದೂರು ಖಂಡಿತವಾಗಿಯೂ ದೊಡ್ಡ ಕಡಿವಾಣ ಹಾಕಲಿದೆ ಎಂದು ಸಾರ್ವಜನಿಕರು ಆಶಿಸಿದ್ದಾರೆ.
‘PDO ಹುದ್ದೆ ಆಕಾಂಕ್ಷಿ’ಗಳಿಗೆ ‘ಸಚಿವ ಈಶ್ವರ್ ಖಂಡ್ರೆ’ ಗುಡ್ ನ್ಯೂಸ್ | KPSC PDO Recruitment
‘ಸಾಗರ ತಹಶೀಲ್ದಾರ್ ಡಾ.ಪ್ರತಿಭಾ’ಗೆ ಗ್ರೇಡ್-2 ಹುದ್ದೆಯಿಂದ ಗ್ರೇಡ್-1 ಹುದ್ದೆಗೆ ಮುಂಬಡ್ತಿ ನೀಡಿ ಸರ್ಕಾರ ಆದೇಶ
ರಾಜ್ಯದ ‘232 ತಹಶೀಲ್ದಾರ್’ಗಳಿಗೆ ಗ್ರೇಡ್-1 ಹುದ್ದೆಗೆ ಬಡ್ತಿ ನೀಡಿ ಸರ್ಕಾರ ಆದೇಶ








