ಬಾಂಬೆ ಹೈಕೋರ್ಟ್ ಸುಮಾರು 90 ವರ್ಷದ ವೃದ್ಧೆಯೊಬ್ಬರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಮುಂದಿನ ಎರಡು ದಶಕಗಳ ಕಾಲ ಅಂದರೆ 2046ನೇ ವರ್ಷಕ್ಕೆ ಮುಂದೂಡಿದೆ. ಇಂತಹ ಪ್ರಕರಣಗಳು ನ್ಯಾಯಾಂಗ ವ್ಯವಸ್ಥೆಗೆ ಅಡ್ಡಿಪಡಿಸುತ್ತಿವೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಮಂಗಳವಾರ (ಏಪ್ರಿಲ್ 28) ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿತೇಂದ್ರ ಜೈನ್, ಮಲಬಾರ್ ಹಿಲ್ಸ್‌ನ ಸಹಕಾರಿ ವಸತಿ ಸಂಘದ ಒಳಗಿನ ವಿವಾದದಿಂದ ಈ ಕಾನೂನು ಹೋರಾಟ ಶುರುವಾಗಿದೆ ಎಂದು ಗಮನಿಸಿದರು. ಇದು ಕೇವಲ “ಅಹಂಕಾರದ ಹೋರಾಟ” (Ego fight) ಆಗಿದ್ದು, ಇದಕ್ಕೆ ಆದ್ಯತೆ ನೀಡುವ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. “ಈ ವಿಷಯವನ್ನು 2046 ರ ನಂತರ ಪಟ್ಟಿ ಮಾಡಿ. ಯಾವುದೇ ಕಾರಣಕ್ಕೂ ಅರ್ಜಿದಾರರು ಹಿರಿಯ ನಾಗರಿಕರು ಅಥವಾ ಅತಿ ಹಿರಿಯ ನಾಗರಿಕರು ಎಂಬ ಕಾರಣಕ್ಕೆ ಈ ಪ್ರಕರಣಕ್ಕೆ ಆದ್ಯತೆ ನೀಡಬಾರದು. 2046 ಕ್ಕಿಂತ ಮೊದಲು ಈ ವಿಷಯವನ್ನು ವಿಚಾರಣೆಗೆ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ” ಎಂದು ನ್ಯಾಯಮೂರ್ತಿ ಜೈನ್ ಹೇಳಿದರು.
ಪ್ರಕರಣದ ಹಿನ್ನೆಲೆ:
ಈ ಪ್ರಕರಣವು 2017ರಲ್ಲಿ ಆರಂಭವಾಯಿತು. ಆಗ 90 ವರ್ಷ ವಯಸ್ಸಿನ ತರಿಣಿಬಹೇನ್ ದೇಸಾಯಿ ಮತ್ತು ಅವರ 57 ವರ್ಷದ ಮಗಳು ಶ್ಯಾಮ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯ ವ್ಯವಸ್ಥಾಪಕ ಸಮಿತಿ ಸದಸ್ಯರ ವಿರುದ್ಧ 20 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಸುಮಾರು ಹತ್ತು ವರ್ಷಗಳ ಹಿಂದೆ ದುರಸ್ತಿ ಮತ್ತು ನಿರ್ವಹಣಾ ನಿಧಿಯ ಸಂಗ್ರಹಣೆಯ ವಿಚಾರದಲ್ಲಿ ಈ ಸಂಘರ್ಷ ಶುರುವಾಗಿತ್ತು. ಸಭೆಯ ನಡಾವಳಿಯಲ್ಲಿ ತಮ್ಮನ್ನು “ಬಾಕಿದಾರರು” (Defaulters) ಎಂದು ಕರೆಯಲಾಗಿದೆ, ಇದರಿಂದ ನಮಗೆ ಮಾನಸಿಕ ಸಂಕಟ ಮತ್ತು ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ದೂರುದಾರರು ಆರೋಪಿಸಿದ್ದರು.
ಕ್ಷಮೆಯಾಚನೆಗೆ ನಿರಾಕರಣೆ:
ಏಪ್ರಿಲ್ 20 ರಂದು ನ್ಯಾಯಮೂರ್ತಿ ಜೈನ್ ಅವರು, ಪ್ರತಿವಾದಿಗಳು “ಬೇಷರತ್ ಕ್ಷಮೆಯಾಚಿಸಿದರೆ” ವಿಷಯವನ್ನು ಬಗೆಹರಿಸಬಹುದು ಎಂದು ಸಲಹೆ ನೀಡಿದ್ದರು. ಅದರಂತೆ ಸಮಿತಿಯ ಮಾಜಿ ಸದಸ್ಯರು ಬೇಷರತ್ ಕ್ಷಮೆಯಾಚಿಸಲು ಒಪ್ಪಿಕೊಂಡರು. ಆದರೆ, 90 ವರ್ಷದ ವೃದ್ಧೆ ಈ ರಾಜಿ ಸಂಧಾನಕ್ಕೆ ಒಪ್ಪದೆ, ಪೂರ್ಣ ಪ್ರಮಾಣದ ಕಾನೂನು ಹೋರಾಟ ಮುಂದುವರಿಸುವುದಾಗಿ ಹಠ ಹಿಡಿದರು.
Subscribe to Updates
Get the latest creative news from FooBar about art, design and business.








