ಶಾಜಾಪುರ (ಮಧ್ಯಪ್ರದೇಶ): ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಸಣ್ಣ ನಿರ್ಲಕ್ಷ್ಯ ಅಥವಾ ತಾಂತ್ರಿಕ ದೋಷ ಎಷ್ಟು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಮಧ್ಯಪ್ರದೇಶದ ಶಾಜಾಪುರದಲ್ಲಿ ನಡೆದ ಘಟನೆಯೇ ಸಾಕ್ಷಿ. ಇಲ್ಲಿನ ಲಕ್ಷ್ಮಿ ನಗರ ಪ್ರದೇಶದಲ್ಲಿರುವ ಸರ್ಕಾರಿ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್ನ ಅಡುಗೆ ಮನೆಯಲ್ಲಿ ಪ್ರೆಶರ್ ಕುಕ್ಕರ್ ಬಾಂಬ್ನಂತೆ ಭೀಕರವಾಗಿ ಸ್ಫೋಟಗೊಂಡಿದ್ದು, ಮಹಿಳಾ ಅಡುಗೆ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಇಡೀ ಭೀಕರ ದೃಶ್ಯ ಅಲ್ಲಿನ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆ ನಡೆದಿದ್ದು ಹೇಗೆ?
ಹಾಸ್ಟೆಲ್ನಲ್ಲಿ ಎಂದಿನಂತೆ ವಿದ್ಯಾರ್ಥಿಗಳಿಗೆ ಅಡುಗೆ ಸಿದ್ಧಪಡಿಸಲಾಗುತ್ತಿತ್ತು. ಗಾಯಗೊಂಡ ಮಹಿಳಾ ಸಿಬ್ಬಂದಿ ರಾಮಕನ್ಯಾ ಬಾಯಿ ಅವರು ಗ್ಯಾಸ್ ಒಲೆಯ ಒಂದು ಬರ್ನರ್ ಮೇಲೆ ಕಡಾಯಿಯನ್ನಿಟ್ಟು, ಮತ್ತೊಂದು ಬರ್ನರ್ ಮೇಲಿದ್ದ ಪ್ರೆಶರ್ ಕುಕ್ಕರ್ ಅನ್ನು ಮುಟ್ಟಲು ಮುಂದಾಗಿದ್ದಾರೆ. ಅದೇ ಕ್ಷಣದಲ್ಲಿ ಕುಕ್ಕರ್ ಭೀಕರ ಶಬ್ದದೊಂದಿಗೆ ಸ್ಫೋಟಗೊಂಡಿದೆ.
ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಕುಕ್ಕರ್ನ ಮುಚ್ಚಳವು ಗಾಳಿಯಲ್ಲಿ ಹಾರಿ ಬಂದು ನೇರವಾಗಿ ಮಹಿಳೆಯ ಎದೆಗೆ ಬಡಿದಿದೆ. ಜೊತೆಗೆ ಕುಕ್ಕರ್ನಲ್ಲಿದ್ದ ಬಿಸಿ ಬಿಸಿ ಬೇಳೆ ಮತ್ತು ನೀರು ಸಿಡಿದಿದ್ದರಿಂದ ಅವರ ಕೈ ಹಾಗೂ ದೇಹದ ಭಾಗಗಳು ತೀವ್ರವಾಗಿ ಸುಟ್ಟುಹೋಗಿವೆ.
ಮಹಿಳೆಯ ಸಮಯಪ್ರಜ್ಞೆ
ಇಷ್ಟೊಂದು ದೊಡ್ಡ ಅಪಘಾತ ಸಂಭವಿಸಿದರೂ ಗಾಯದ ನೋವಿನಲ್ಲೇ ಮಹಿಳೆ ಅದ್ಭುತ ಸಮಯಪ್ರಜ್ಞೆ ಮೆರೆದಿದ್ದಾರೆ. ತಕ್ಷಣವೇ ಪಕ್ಕದಲ್ಲಿದ್ದ ತಣ್ಣೀರನ್ನು ತಂದು ತಮ್ಮ ದೇಹದ ಮೇಲೆ ಸುರಿದುಕೊಂಡಿದ್ದಾರೆ. ಇದರಿಂದಾಗಿ ಉರಿ ಮತ್ತು ಗಾಯದ ತೀವ್ರತೆ ಮತ್ತಷ್ಟು ಹೆಚ್ಚಾಗುವುದು ತಪ್ಪಿದೆ. ಸ್ಫೋಟದ ಭೀಕರ ಶಬ್ದ ಕೇಳಿ ಹಾಸ್ಟೆಲ್ನಲ್ಲಿದ್ದ ಸುಮಾರು 12 ವಿದ್ಯಾರ್ಥಿಗಳು ಹಾಗೂ ಇತರ ಸಿಬ್ಬಂದಿ ಓಡಿ ಬಂದು ತಕ್ಷಣವೇ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪರಿಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.








