ಭಾರತವು ಯಾವಾಗಲೂ ಶಾಂತಿಯ ಪರವಾಗಿಯೇ ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಫ್ರಾನ್ಸ್‌ನಲ್ಲಿ ನಡೆದ ಜಿ7 (G7) ಶೃಂಗಸಭೆಯ ಸಂದರ್ಭದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗಿನ ಭೇಟಿಯ ವೇಳೆ ತಿಳಿಸಿದ್ದಾರೆ. ಇದೇ ವೇಳೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳನ್ನು ಯುದ್ಧಕ್ಕೂ ಮುನ್ನ ಇದ್ದ ಸ್ಥಿತಿಗೆ ಮರುಸ್ಥಾಪಿಸುವಂತೆ ಅವರು ಕರೆ ನೀಡಿದ್ದಾರೆ.
ಆಗಸ್ಟ್ 2024 ರಲ್ಲಿ ಮೋದಿ ಅವರು ಉಕ್ರೇನ್‌ಗೆ ತಮ್ಮ ಮೊದಲ ಭೇಟಿ ನೀಡಿದ ನಂತರ ಮತ್ತು ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆಯ ಮಹಾಸಭೆಯ ಸಂದರ್ಭದಲ್ಲಿ ನಡೆದ ಭೇಟಿಯ ನಂತರ, ಉಭಯ ನಾಯಕರು ಹಲವಾರು ಬಾರಿ ಫೋನ್‌ನಲ್ಲಿ ಮಾತನಾಡಿದ್ದಾರೆ. ಆದರೆ ದೀರ್ಘಾವಧಿಯ ನಂತರ ಇಬ್ಬರ ನಡುವೆ ನಡೆದ ಮೊದಲ ಮುಖಾಮುಖಿ ಭೇಟಿ ಇದಾಗಿದೆ.
ಭೇಟಿಯ ನಂತರ ಪ್ರಧಾನಿ ಮೋದಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಉಕ್ರೇನ್ ವ್ಯಾಪಕವಾಗಿ ಪರಸ್ಪರ ತೊಡಗಿಸಿಕೊಂಡಿವೆ ಮತ್ತು ಇದು ವಿವಿಧ ಸಹಕಾರ ಕ್ಷೇತ್ರಗಳಲ್ಲಿ ಪ್ರತಿಫಲಿಸುತ್ತಿದೆ ಎಂದು ಉಲ್ಲೇಖಿಸಿದ್ದಾರೆ.
”ನಮ್ಮ ಇಂದಿನ ಮಾತುಕತೆಯು ನಮ್ಮ ಸಹಕಾರದ ವಿವಿಧ ಆಯಾಮಗಳನ್ನು ಪರಾಮರ್ಶಿಸುವ ಕುರಿತಾಗಿತ್ತು. ಯುದ್ಧದ ಪೂರ್ವ ಅವಧಿಯಲ್ಲಿದ್ದ ವ್ಯಾಪಾರ ಸಂಬಂಧಗಳನ್ನು ಮತ್ತೆ ಮರುಸ್ಥಾಪಿಸಬೇಕೆಂಬ ವಿಷಯದಲ್ಲಿ ನಾವಿಬ್ಬರೂ ಸಹಮತ ವ್ಯಕ್ತಪಡಿಸಿದ್ದೇವೆ. ಮಾನವೀಯತೆಯ ಮೌಲ್ಯಗಳಿಗೆ ಎಲ್ಲದಕ್ಕಿಂತ ಮಿಗಿಲಾದ ಆದ್ಯತೆ ನೀಡುವ ಭಾರತವು, ಯಾವಾಗಲೂ ಶಾಂತಿಯ ಪರವಾಗಿಯೇ ನಿಲ್ಲಲಿದೆ ಎಂಬುದನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದೇನೆ,” ಎಂದು ಮೋದಿ ಹೇಳಿದ್ದಾರೆ.
ಝೆಲೆನ್ಸ್ಕಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿ, ಭಾರತ ಮತ್ತು ಉಕ್ರೇನ್ ಸಹಕಾರಕ್ಕೆ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿವೆ ಮತ್ತು ಉಭಯ ದೇಶಗಳು ಜಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿವೆ ಎಂದು ಹೇಳಿದ್ದಾರೆ. “ಇಂದು ನಾವು ಆ ಯೋಜನೆಗಳಿಗೆ ಇನ್ನಷ್ಟು ಬಲ ತುಂಬುವುದು ಹೇಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಹೇಗೆ ವಿಸ್ತರಿಸುವುದು ಎಂಬುದರ ಕುರಿತು ಚರ್ಚಿಸಿದ್ದೇವೆ. ಮುಖ್ಯವಾಗಿ, ಪ್ರಧಾನಮಂತ್ರಿಯವರು ಉಕ್ರೇನ್‌ನೊಂದಿಗೆ ಪರಸ್ಪರ ಪ್ರಯೋಜನಕಾರಿ ಸಂಬಂಧಗಳನ್ನು ವೃದ್ಧಿಸಲು ಆಸಕ್ತಿ ಹೊಂದಿದ್ದಾರೆ ಮತ್ತು ಈ ಪಾಲುದಾರಿಕೆಯು ನಮ್ಮ ಜನರನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತದೆ ಎಂದು ಅವರು ನಂಬಿದ್ದಾರೆ,” ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.
ಜಂಟಿಯಾಗಿ ಅನುಷ್ಠಾನಗೊಳಿಸಬಹುದಾದ ಉತ್ತಮ ಕೈಗಾರಿಕಾ ಮತ್ತು ಇತರ ಯೋಜನೆಗಳು ಲಭ್ಯವಿವೆ ಎಂದು ಹೇಳಿದ ಅವರು, ಈ ಕುರಿತಾದ ವಿವರಗಳ ಮೇಲೆ ಕೆಲಸ ಮಾಡಲು ಉಭಯ ನಾಯಕರು ತಮ್ಮ ತಂಡಗಳಿಗೆ ಸೂಚಿಸಲು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ಭೇಟಿಯನ್ನು ಫಲಪ್ರದ ಎಂದು ಬಣ್ಣಿಸಿದ್ದು, ವ್ಯಾಪಾರ ಮತ್ತು ಆರ್ಥಿಕ ಸಹಕಾರ ಸೇರಿದಂತೆ ಭಾರತ-ಉಕ್ರೇನ್ ಸಂಬಂಧಗಳನ್ನು ಬಲಪಡಿಸುವ ಕುರಿತು ನಾಯಕರು ಚರ್ಚಿಸಿದ್ದಾರೆ ಎಂದು ತಿಳಿಸಿದ್ದಾರೆ. “ಭಾರತವು ಯಾವಾಗಲೂ ಶಾಂತಿಯ ಪರವಾಗಿ ನಿಲ್ಲುತ್ತದೆ ಮತ್ತು ಈ ಪ್ರದೇಶದಲ್ಲಿ ಶೀಘ್ರದಲ್ಲೇ ಶಾಂತಿ ಮರಳಲು ಸಂವಾದ ಹಾಗೂ ರಾಜತಾಂತ್ರಿಕತೆಯ ಹಾದಿಯನ್ನು ಅನುಸರಿಸಬೇಕು ಎಂದು ಮೋದಿ ಅವರು ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ,” ಎಂದು ಜೈಸ್ವಾಲ್ ಹೇಳಿದ್ದಾರೆ.








