ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇನ್ಮುಂದೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಹಾಜರಾತಿಯನ್ನು ಡಿಜಿಟಲ್ ರೂಪದಲ್ಲಿ ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ‘ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆ’ (KAAMS) ತಂತ್ರಾಂಶದ ಪರಿಣಾಮಕಾರಿ ಬಳಕೆಗಾಗಿ ವಿಶೇಷ ನೋಡಲ್ ಅಧಿಕಾರಿಯೊಬ್ಬರನ್ನು ನೇಮಕ ಮಾಡಿ ಪೊಲೀಸ್ ಪ್ರಧಾನ ಕಚೇರಿ ಆದೇಶ ಹೊರಡಿಸಿದೆ.
ಬೆಳಗ್ಗೆ 10 ಗಂಟೆಗೆ ‘ಚೆಕ್ ಇನ್’ ಕಡ್ಡಾಯ:
ಸರ್ಕಾರದ ಆದೇಶದ ಅನ್ವಯ, ರಾಜ್ಯದ ಎಲ್ಲಾ ಇಲಾಖೆಗಳು ಹಾಗೂ ನಿಗಮ-ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರು ತಮ್ಮ ಮೊಬೈಲ್ ಮೂಲಕವೇ ಹಾಜರಾತಿ ದಾಖಲಿಸಬೇಕಿದೆ. ಅದರಂತೆ, ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರತಿದಿನ ಬೆಳಗ್ಗೆ 10:00 ಗಂಟೆಯೊಳಗೆ ‘ಕರ್ತವ್ಯ’ (KAAMS) ಆ್ಯಪ್ನಲ್ಲಿ ಕಡ್ಡಾಯವಾಗಿ ‘ಚೆಕ್ ಇನ್’ (CHECK IN) ಮಾಡಬೇಕಾಗುತ್ತದೆ. ಅದೇ ರೀತಿ ಕಚೇರಿಯಿಂದ ನಿರ್ಗಮಿಸುವಾಗ ‘ಚೆಕ್ ಔಟ್’ (CHECK OUT) ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ನೋಡಲ್ ಅಧಿಕಾರಿಯಾಗಿ ಡಿಐಜಿಪಿ ನೇಮಕ:
ಈ ನೂತನ ತಂತ್ರಾಂಶವನ್ನು ಪೊಲೀಸ್ ಇಲಾಖೆಯ ಎಲ್ಲಾ ಹಂತದ ಕಚೇರಿಗಳಲ್ಲಿ ಶೀಘ್ರವಾಗಿ ಮತ್ತು ಯಶಸ್ವಿಯಾಗಿ ಅನುಷ್ಠಾನಗೊಳಿಸಲು, ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಯ ಕೇಂದ್ರಸ್ಥಾನದ ಡಿಐಜಿಪಿ (DIGP) ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಡಿಜಿ ಮತ್ತು ಐಜಿಪಿ ಅವರ ಅನುಮೋದನೆಯ ಮೇರೆಗೆ ಪೊಲೀಸ್ ಮಹಾ ನಿರೀಕ್ಷಕರು (ಕೇಂದ್ರಸ್ಥಾನ-1) ಆಗಿರುವ ಸತೀಶ್ ಕುಮಾರ್ ಎನ್., ಐಪಿಎಸ್ ಅವರು ಜೂನ್ 17, 2026 ರಂದು ಈ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ. ಇಲಾಖೆಯ ಎಲ್ಲಾ ಹಂತಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲು ಶೀಘ್ರ ಕ್ರಮ ಕೈಗೊಂಡು ವರದಿ ನೀಡುವಂತೆ ನೋಡಲ್ ಅಧಿಕಾರಿಗೆ ಸೂಚನೆ ನೀಡಲಾಗಿದೆ.









