ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ವಿರುದ್ಧ ಚಿತ್ರರಂಗದಲ್ಲಿ ನಿಷೇಧ ಹೇರಲಾಗಿದೆ ಎಂಬ ಸುದ್ದಿಗಳು ವ್ಯಾಪಕವಾಗಿ ಹರಿದಾಡುತ್ತಿರುವ ಬೆನ್ನಲ್ಲೇ, ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟ (FWICE) ಈ ಕುರಿತು ಪ್ರಮುಖ ಸ್ಪಷ್ಟನೆ ನೀಡಿದೆ. ನಟನ ವಿರುದ್ಧ ಹೇರಿರುವುದು ಬ್ಯಾನ್ ಅಲ್ಲ, ಅದು ಕೇವಲ ‘ಅಸಹಕಾರ’ (ನಾನ್-ಕೋಆಪರೇಷನ್) ಮಾತ್ರ ಎಂದು ಎಫ್‌ಡಬ್ಲುಐಸಿಇ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ತಿಳಿಸಿದ್ದಾರೆ.
ಬಹಳ ನಿರೀಕ್ಷೆ ಮೂಡಿಸಿದ್ದ ‘ಡಾನ್ 3’ (Don 3) ಚಿತ್ರದ ವಿವಾದದ ಬಳಿಕ ರಣವೀರ್ ಸಿಂಗ್ ವಿರುದ್ಧ FWICE ಅಸಹಕಾರ ನಿರ್ಣಯ ಘೋಷಿಸಿತ್ತು. ಇದಾದ ಬೆನ್ನಲ್ಲೇ ನಟನನ್ನು ಚಿತ್ರರಂಗದಿಂದಲೇ ಬ್ಯಾನ್ ಮಾಡಲಾಗಿದೆ ಎಂಬ ವದಂತಿಗಳು ಹಬ್ಬಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಶೋಕ್ ಪಂಡಿತ್, “ಯಾರನ್ನೂ ಬ್ಯಾನ್ ಮಾಡಲು ನಾವು ಕೋರ್ಟ್ ಅಲ್ಲ. ನಮ್ಮ ಸಂಘಟನೆಯ 30 ವಿಭಾಗಗಳ ಸದಸ್ಯರು ರಣವೀರ್ ಸಿಂಗ್ ಜೊತೆ ಕೆಲಸ ಮಾಡಬಾರದು ಎಂದು ಮಾತ್ರ ಸೂಚನೆ ನೀಡಿದ್ದೇವೆ,” ಎಂದು ಸ್ಪಷ್ಟಪಡಿಸಿದ್ದಾರೆ.
ವಿವಾದಕ್ಕೆ ಕಾರಣವೇನು?
ಎಫ್‌ಡಬ್ಲುಐಸಿಇ ಮಾಹಿತಿ ಪ್ರಕಾರ, ರಣವೀರ್ ಸಿಂಗ್ ಅವರು ‘ಡಾನ್ 3’ ಸಿನಿಮಾದಿಂದ ದಿಢೀರನೆ ಹೊರಬಂದಿದ್ದೇ ಈ ಇಡೀ ವಿವಾದಕ್ಕೆ ಮೂಲ ಕಾರಣವಾಗಿದೆ. ಚಿತ್ರದ ನಿರ್ಮಾಪಕರಾದ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರು ಈಗಾಗಲೇ ಈ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳಿಗಾಗಿ ಸುಮಾರು 45 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದಾರೆ ಎನ್ನಲಾಗಿದೆ.
”ನಟರು ಈ ರೀತಿ ದಿಢೀರ್ ನಿರ್ಧಾರ ಕೈಗೊಳ್ಳುವುದರಿಂದ ನಿರ್ಮಾಪಕರಿಗೆ ಭಾರಿ ಆರ್ಥಿಕ ನಷ್ಟ ಉಂಟಾಗುತ್ತದೆ. ಹೀಗಾಗಿ ಸಮಸ್ಯೆ ಬಗೆಹರಿಯುವವರೆಗೂ ರಣವೀರ್ ಸಿಂಗ್ ಅವರೊಂದಿಗೆ ಒಕ್ಕೂಟದ ಯಾವುದೇ ಸದಸ್ಯರು ಸಹಕರಿಸದಂತೆ ಸೂಚಿಸಲಾಗಿದೆ. ಸಂಬಂಧಪಟ್ಟವರೆಲ್ಲರೂ ಒಟ್ಟಿಗೆ ಕುಳಿತು ಮಾತುಕತೆಯ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು.”
— ಅಶೋಕ್ ಪಂಡಿತ್, ಮುಖ್ಯ ಸಲಹೆಗಾರ, FWICE
ಸದ್ಯ ಈ ವಿವಾದ ಬಾಲಿವುಡ್ ಅಂಗಳದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ರಣವೀರ್ ಸಿಂಗ್ ಮುಂದಿನ ನಡೆ ಏನಿರಲಿದೆ ಎಂಬುದು ಕುತೂಹಲ ಮೂಡಿಸಿದೆ.








