ಬೆಂಗಳೂರು : ಮಧ್ಯ ಪ್ರಾಚ್ಯ ದೇಶಗಳ ನಡುವೆ ಯುದ್ಧ ನಡೆಯುತ್ತಿದ್ದು ಈ ಒಂದು ಯುದ್ಧದ ಪರಿಣಾಮ ರೈತರ ಮೇಲೆ ಬೀರಿದೆ. ಹೌದು ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಈರುಳ್ಳಿ ಬೆಲೆಯ ದರ ಇದೀಗ ಪಾತಾಳಕ್ಕೆ ಕುಸಿದಿದ್ದು, ರೈತರು ಇದೀಗ ಕಣ್ಣೀರು ಹಾಕುತ್ತಿದ್ದಾರೆ.
ಹೌದು ಸೊಲ್ಲಾಪುರ ಸೇರಿ ಮಹಾರಾಷ್ಟ್ರ ಈರುಳ್ಳಿ ವಿದೇಶಕ್ಕೆ ರಫ್ತಾಗದ ಹಿನ್ನೆಲೆ ರಾಯಚೂರು ಜಿಲ್ಲೆಯಲ್ಲಿ ಬೆಳೆದ ಈರುಳ್ಳಿ ಬೇಡಿಕೆ ಕುಸಿತವಾಗುತ್ತಿದೆ. ಹೊರ ರಾಜ್ಯಗಳ ಖರೀದಿದಾರರು, ದಲ್ಲಾಳಿಗಳು ಬಾರದ ಹಿನ್ನೆಲೆ ಬೆಲೆ ಕುಸಿಯುತ್ತಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 600 ರಿಂದ 800 ರೂಪಾಯಿಗೆ ಕ್ವಿಂಟಾಲ್ ಈರುಳ್ಳಿ ಮಾರಾಟವಾಗುತ್ತಿದೆ.
ಎಕರೆಗೆ 50 ರಿಂದ 60 ಸಾವಿರ ರೂ. ಖರ್ಚು ಮಾಡಿ ಈರುಳ್ಳಿ ಬೆಳೆದ ರೈತರ ಕಣ್ಣಲ್ಲಿ ನೀರು ಬರುತ್ತಿದೆ. ಮಾರುಕಟ್ಟೆಗೆ ಈರುಳ್ಳಿ ಸಾಗಣೆ ಮಾಡುವ ವೆಚ್ಚವೂ ಸಹ ವಾಪಸ್ ಬರುತ್ತಿಲ್ಲ ಅಂತ ರೈತರ ಅಳಲು ತೋಡಿಕೊಂಡಿದ್ದಾರೆ. ಕಡಿಮೆ ಗುಣಮಟ್ಟದ ಈರುಳ್ಳಿಯನ್ನ ಕೇಳುವವರೇ ಇಲ್ಲದ ಪರಸ್ಥಿತಿ ಎದುರಾಗಿದೆ. ತರಕಾರಿ ಮಾರುಕಟ್ಟೆಯಲ್ಲಿ 100 ರೂಪಾಯಿಗೆ 6 ಕೆಜಿ ಈರುಳ್ಳಿ ಮಾರಾಟವಾಗುತ್ತಿದೆ. ಹಾಗಾಗಿ ಸರ್ಕಾರ ಬೆಂಬಲ ಬೆಲೆ ಘೋಷಿಸಿ ಈರುಳ್ಳಿ ಖರೀದಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ.








