ನವದೆಹಲಿ: ಆಹಾರ ಪದಾರ್ಥಗಳನ್ನು ದಿನಪತ್ರಿಕೆಗಳಲ್ಲಿ ಸುತ್ತಿ ಕೊಡುವುದು ಅಥವಾ ಪತ್ರಿಕೆಯ ಮೇಲೆ ಬಡಿಸುವುದು ಸಾಮಾನ್ಯ ದೃಶ್ಯ. ಆದರೆ ಈ ಅಭ್ಯಾಸ ನಿಮ್ಮ ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡಬಹುದು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಎಚ್ಚರಿಕೆ ನೀಡಿದೆ. ಇದೇ ಕಾರಣಕ್ಕೆ ಆಹಾರ ಪ್ಯಾಕಿಂಗ್ಗಾಗಿ ಪತ್ರಿಕೆ ಹಾಗೂ ಇತರೆ ಮುದ್ರಿತ ಕಾಗದಗಳ ಬಳಕೆಯನ್ನು ತಕ್ಷಣವೇ ನಿಲ್ಲಿಸುವಂತೆ ಆಹಾರ ವ್ಯಾಪಾರಿಗಳಿಗೆ ಸೂಚಿಸಲಾಗಿದೆ.
ಪತ್ರಿಕೆಯಲ್ಲಿ ಆಹಾರ ಪ್ಯಾಕ್ ಮಾಡಿದರೆ ಕ್ರಮ ಖಚಿತ
ಇತ್ತೀಚೆಗೆ ಮುಂಬೈನಲ್ಲಿ ವಡಾಪಾವ್ ಮಾರಾಟಗಾರರು ಆಹಾರವನ್ನು ದಿನಪತ್ರಿಕೆಯಲ್ಲಿ ಪ್ಯಾಕ್ ಮಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ FSSAI ಪಶ್ಚಿಮ ವಲಯದ ಅಧಿಕಾರಿಗಳು ಹಾಗೂ ಬೃಹನ್ ಮುಂಬೈ ಮಹಾನಗರ ಪಾಲಿಕೆ (BMC) ಜಂಟಿಯಾಗಿ ಪರಿಶೀಲನೆ ನಡೆಸಿ ಸಂಬಂಧಿತರಿಗೆ ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಗಳ ಪ್ರಕಾರ, ಆಹಾರವನ್ನು ಸುತ್ತಲು, ಪ್ಯಾಕ್ ಮಾಡಲು ಅಥವಾ ಬಡಿಸಲು ಯಾವುದೇ ರೀತಿಯ ಮುದ್ರಿತ ಕಾಗದಗಳನ್ನು ಬಳಸುವುದು ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿದೆ.
ಯಾರಿಗೆ ಅನ್ವಯವಾಗಲಿದೆ ಈ ನಿಯಮ?
ಈ ಆದೇಶವು ಕೇವಲ ಬೀದಿ ಬದಿ ವ್ಯಾಪಾರಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಸ್ಟ್ರೀಟ್ ಫುಡ್ ಮಾರಾಟಗಾರರು, ಹೋಟೆಲ್ಗಳು, ರೆಸ್ಟೋರೆಂಟ್ಗಳು, ಕ್ಲೌಡ್ ಕಿಚನ್ಗಳು, ಕ್ಯಾಟರಿಂಗ್ ಸೇವೆಗಳು, ಫುಡ್ ಸ್ಟಾಲ್ಗಳು, ಮೊಬೈಲ್ ಫುಡ್ ವೆಂಡರ್ಗಳು ಹಾಗೂ ಸಣ್ಣ ಆಹಾರ ವ್ಯಾಪಾರಿಗಳು ಸೇರಿದಂತೆ ಎಲ್ಲರಿಗೂ ಅನ್ವಯವಾಗಲಿದೆ.
‘ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್ (ಪ್ಯಾಕೇಜಿಂಗ್) ರೆಗ್ಯುಲೇಷನ್ಸ್-2018’ ನಿಯಮಗಳ ಪ್ರಕಾರ, ಆಹಾರ ಪ್ಯಾಕಿಂಗ್ಗೆ ಕೇವಲ ಅನುಮೋದಿತ ಫುಡ್-ಗ್ರೇಡ್ ವಸ್ತುಗಳನ್ನೇ ಬಳಸಬೇಕು.
ಪತ್ರಿಕೆಯ ಶಾಯಿಯಲ್ಲಿ ಅಡಗಿದೆ ಅಪಾಯ
ತಜ್ಞರ ಪ್ರಕಾರ, ದಿನಪತ್ರಿಕೆಗಳ ಮುದ್ರಣಕ್ಕೆ ಬಳಸುವ ಶಾಯಿಯಲ್ಲಿ ಸೀಸ (Lead) ಸೇರಿದಂತೆ ಹಲವು ಅಪಾಯಕಾರಿ ರಾಸಾಯನಿಕಗಳು ಮತ್ತು ಭಾರ ಲೋಹಗಳು ಇರಬಹುದು. ಇವು ಆಹಾರದೊಂದಿಗೆ ಬೆರೆತರೆ ದೇಹಕ್ಕೆ ಹಾನಿಕಾರಕ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ.
ನಿರಂತರವಾಗಿ ಇಂತಹ ಆಹಾರ ಸೇವಿಸುವುದರಿಂದ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು, ವಿಷಕಾರಿ ಪರಿಣಾಮಗಳು ಹಾಗೂ ಇತರೆ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಾಗಬಹುದು ಎಂದು FSSAI ತಿಳಿಸಿದೆ.
ಸೋಂಕು ಹರಡುವ ಸಾಧ್ಯತೆಯೂ ಹೆಚ್ಚು
ದಿನಪತ್ರಿಕೆಗಳು ಹಲವು ಕೈಗಳಿಂದ ಸಾಗುತ್ತವೆ ಹಾಗೂ ವಿವಿಧ ಸ್ಥಳಗಳಲ್ಲಿ ಸಂಗ್ರಹವಾಗುತ್ತವೆ. ಇದರಿಂದ ಅವುಗಳ ಮೇಲೆ ಧೂಳು, ಬ್ಯಾಕ್ಟೀರಿಯಾ ಮತ್ತು ಇತರೆ ಸೂಕ್ಷ್ಮಾಣುಗಳು ಅಂಟಿಕೊಂಡಿರುವ ಸಾಧ್ಯತೆ ಹೆಚ್ಚಿರುತ್ತದೆ. ಅಂತಹ ಕಾಗದಗಳಲ್ಲಿ ಆಹಾರ ಇಡುವುದು ಅಥವಾ ಸೇವಿಸುವುದು ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಗ್ರಾಹಕರಿಗೂ ಎಚ್ಚರಿಕೆ
ಸಮೋಸಾ, ಬಜ್ಜಿ, ವಡೆ, ಪಕೋಡಾ ಸೇರಿದಂತೆ ಎಣ್ಣೆ ಪದಾರ್ಥಗಳನ್ನು ಪತ್ರಿಕೆಯ ಮೇಲೆ ಇಟ್ಟು ಕೊಡುವುದು ಸಾಮಾನ್ಯ. ಕೆಲ ಮನೆಗಳಲ್ಲಿಯೂ ತಿಂಡಿಗಳನ್ನು ಪತ್ರಿಕೆಯ ಮೇಲೆ ಇಡುವ ಅಭ್ಯಾಸವಿದೆ. ಆದರೆ ಇಂತಹ ಪದ್ಧತಿಯನ್ನು ತಕ್ಷಣವೇ ನಿಲ್ಲಿಸುವಂತೆ FSSAI ಸಾರ್ವಜನಿಕರಿಗೆ ಮನವಿ ಮಾಡಿದೆ.








