ಜೋರ್ಹತ್ (ಅಸ್ಸಾಂ): ಅಸ್ಸಾಂನ ಜೋರ್ಹತ್‌ನಲ್ಲಿರುವ ರೌರಿಯಾ ವಾಯುಪಡೆ ನಿಲ್ದಾಣದಲ್ಲಿ ಶನಿವಾರ ಭಾರತೀಯ ವಾಯುಪಡೆಯ (IAF) ‘ಎಎನ್-32’ (AN-32) ಸಾರಿಗೆ ವಿಮಾನ ಪತನಗೊಂಡಿದ್ದು, ಘಟನೆಯಲ್ಲಿ ಐವರು ವಾಯುಪಡೆ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ವಿಮಾನದ ಸಹ-ಪೈಲಟ್ (Co-pilot) ಬದುಕುಳಿದಿದ್ದು, ಸದ್ಯ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೇಲ್ ಅಸ್ಸಾಂನ ಆಯಕಟ್ಟಿನ ಪ್ರಮುಖ ವಾಯುನೆಲೆಯ ಆವರಣದೊಳಗೇ ಈ ಸಾರಿಗೆ ವಿಮಾನ ಪತನಗೊಂಡಿದೆ.ಈ ವಿಮಾನವು ಅರುಣಾಚಲ ಪ್ರದೇಶದಿಂದ ಜೋರ್ಹತ್‌ಗೆ ಹಾರಾಟ ನಡೆಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ಅಪಘಾತದ ಬೆನ್ನಲ್ಲೇ, ಘಟನೆಗೆ ನಿಖರವಾದ ಕಾರಣವನ್ನು ಪತ್ತೆಹಚ್ಚಲು ಭಾರತೀಯ ವಾಯುಪಡೆಯು ಉನ್ನತ ಮಟ್ಟದ ತನಿಖೆಗೆ (Court of Inquiry) ಆದೇಶಿಸಿದೆ.
ಜೋರ್ಹತ್‌ನಲ್ಲಿ ಇಳಿಯುವಾಗ (Landing) ಎಎನ್-32 ವಿಮಾನವು ಅಪಘಾತಕ್ಕೀಡಾಗಿದೆ. ಅಪಘಾತ ಸಂಭವಿಸಿದ ತಕ್ಷಣ ತುರ್ತು ಸ್ಪಂದನಾ ತಂಡಗಳನ್ನು (Emergency response teams) ಸ್ಥಳಕ್ಕೆ ರವಾನಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈ ರೌರಿಯಾ ವಾಯುಪಡೆ ನಿಲ್ದಾಣವು ಈಶಾನ್ಯ ಭಾರತದಲ್ಲಿ ಭಾರತೀಯ ವಾಯುಪಡೆಯ ಅತ್ಯಂತ ಪ್ರಮುಖ ನೆಲೆಯಾಗಿದ್ದು, ಪ್ರಾದೇಶಿಕ ಸೇನಾ ಕಾರ್ಯಾಚರಣೆ ಹಾಗೂ ಯುದ್ಧತಂತ್ರದ ಸರಬರಾಜುಗಳಲ್ಲಿ (Logistics) ಪ್ರಮುಖ ಪಾತ್ರ ವಹಿಸುತ್ತದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.









