ನವದೆಹಲಿ: ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾದ ಹಿರಿಯ ಪೈಲಟ್ ಒಬ್ಬರು ಇಂಡೋನೇಷ್ಯಾದ ಬಾಲಿಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿಮಾನ ಕಾರ್ಯಾಚರಣೆಯ ನಡುವೆ ನಿಗದಿಪಡಿಸಲಾದ ಸಿಬ್ಬಂದಿಯ ವಿರಾಮದ (Scheduled Layover) ಸಮಯದಲ್ಲಿ ಈ ಘಟನೆ ಸಂಭವಿಸಿದೆ.
ಏರ್ ಇಂಡಿಯಾ ವಿಮಾನವನ್ನು ಬಾಲಿಗೆ ಚಲಾಯಿಸಿಕೊಂಡು ಬಂದಿದ್ದ ಪೈಲಟ್, ಅಲ್ಲಿನ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ.
ತಮ್ಮ ಅತ್ಯಂತ ಅನುಭವಿ ಮತ್ತು ನಿಷ್ಠಾವಂತ ಸಹೋದ್ಯೋಗಿಯನ್ನು ಕಳೆದುಕೊಂಡಿರುವುದಕ್ಕೆ ಏರ್ ಇಂಡಿಯಾ ಸಂಸ್ಥೆ ಮತ್ತು ಸಿಬ್ಬಂದಿ ವರ್ಗ ತೀವ್ರ ಕಂಬನಿ ಮಿಡಿದಿದೆ.
“ನಮ್ಮ ಪೈಲಟ್ ಅವರ ಅಕಾಲಿಕ ನಿಧನದಿಂದ ನಮಗೆ ತೀವ್ರ ದುಃಖವಾಗಿದೆ. ಅವರ ಕುಟುಂಬದವರ ಜೊತೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ ಮತ್ತು ಮೃತದೇಹವನ್ನು ಭಾರತಕ್ಕೆ ತರಲು ಎಲ್ಲಾ ರೀತಿಯ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ” ಎಂದು ಸಂಸ್ಥೆ ತಿಳಿಸಿದೆ.








