ಬೆಂಗಳೂರು: ಧರ್ಮಸ್ಥಳದ ಸುತ್ತಮುತ್ತ ನೂರಾರು ಹೆಣಗಳನ್ನು ಹೂತುಹಾಕಲಾಗಿದೆ ಎಂಬ ಆಘಾತಕಾರಿ ಹೇಳಿಕೆ ನೀಡಿ ರಾಜ್ಯಾದ್ಯಂತ ತಲ್ಲಣ ಸೃಷ್ಟಿಸಿದ್ದ ‘ಬುರುಡೆ ಗ್ಯಾಂಗ್’ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಕೊನೆಗೂ ಮೌನ ಮುರಿದಿದ್ದಾರೆ. ಈ ಗಂಭೀರ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಬುಧವಾರ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿರುವ ಅವರು, ಇಡೀ ವಿವಾದದ ಕುರಿತು ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ. ತಾವು ಎಂದಿಗೂ ಧರ್ಮಸ್ಥಳಕ್ಕೆ ಹೋಗಿಲ್ಲ ಹಾಗೂ ಗಿರೀಶ್ ಮಟಣ್ಣನವರ್ ಅವರನ್ನು ಖುದ್ದಾಗಿ ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಕರಣದ ಹಿನ್ನೆಲೆಯನ್ನು ವಿವರಿಸಿದ ನಟ, ಈ ಹಿಂದೆ ಪ್ರಕರಣದ ಪ್ರಮುಖ ವ್ಯಕ್ತಿ ಚಿನ್ನಯ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದಾಗ ಅದರಲ್ಲಿ ತಮ್ಮ ಹೆಸರನ್ನು ಉಲ್ಲೇಖಿಸಲಾಗಿತ್ತು. ಗಿರೀಶ್ ಮಟಣ್ಣನವರ್ ಅವರು ತಮಗೆ ಫೋನ್ ಮಾಡಿ ಚಿನ್ನಯ್ಯ ಎಂಬಾತನನ್ನು ಪರಿಚಯಿಸಿದ್ದರು. ಆ ವೇಳೆ ಚಿನ್ನಯ್ಯ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದ ಕೆಲವು ವಾಯ್ಸ್ ನೋಟ್‌ಗಳನ್ನು ಕಳುಹಿಸಿಕೊಟ್ಟಿದ್ದ. ಈ ಮಾತುಕತೆಯ ವೇಳೆ “ಬರುವ 29ರಂದು ನಾನು ನಿನ್ನನ್ನು ಬಂದು ಅಪ್ಪಿಕೊಳ್ಳುತ್ತೇನೆ” ಎಂದು ತಾವು ಹೇಳಿರುವುದಾಗಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಗೊಂದಲಗಳಿಗೆ ತೆರೆ ಎಳೆಯಲು ಎರಡು ದಿನಗಳಲ್ಲಿ ಬೆಂಗಳೂರಿಗೆ ಬಂದು ಸತ್ಯ ತಿಳಿಸುವುದಾಗಿ ಪ್ರಕಾಶ್ ರಾಜ್ ಈ ಹಿಂದೆ ವಾಗ್ದಾನ ಮಾಡಿದ್ದರು.
ಅದರಂತೆ ಇಂದು ಮಾಧ್ಯಮಗಳ ಮುಂದೆ ಸತ್ಯ ಒಪ್ಪಿಕೊಂಡ ಪ್ರಕಾಶ್ ರಾಜ್, “ಹೌದು, ನಾನು ಚಿನ್ನಯ್ಯನ ಜೊತೆ ಮಾತನಾಡಿದ್ದು ನಿಜ” ಎಂದು ಹೇಳಿದ್ದಾರೆ. ಪ್ರಕರಣದ ತನಿಖೆಗಾಗಿ SIT (ವಿಶೇಷ ತನಿಖಾ ದಳ) ರಚನೆಯಾಗುವ ಮುನ್ನ ಹಾಗೂ ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರು ಚಿನ್ನಯ್ಯನನ್ನು ಭೇಟಿ ಮಾಡುವ ಮೊದಲೇ ಈ ಫೋನ್ ಕರೆ ನಡೆದಿತ್ತು. ಗಿರೀಶ್ ಮಟ್ಟಣ್ಣನವರ್ ಕರೆ ಮಾಡಿ, “ಧರ್ಮಸ್ಥಳದ ಬಗ್ಗೆ ಸ್ಫೋಟಕ ಮಾಹಿತಿ ಇಟ್ಟುಕೊಂಡಿರುವ ವ್ಯಕ್ತಿ ನನ್ನ ಜೊತೆಗಿದ್ದಾನೆ, ಆತ ನಿಮ್ಮೊಂದಿಗೆ ಮಾತನಾಡಬೇಕಂತೆ” ಎಂದಾಗ ತಾವು ಮಾತನಾಡಿದ್ದಾಗಿ ತಿಳಿಸಿದರು. ಅಧಿಕಾರಿಗಳ ಮುಂದೆ ಸತ್ಯವನ್ನು ಧೈರ್ಯವಾಗಿ ಹೇಳುವಂತೆ ಚಿನ್ನಯ್ಯನಿಗೆ ಧೈರ್ಯ ತುಂಬುವ ಭರದಲ್ಲಿ ಆ ಮಾತುಗಳನ್ನು ಆಡಿದ್ದಾಗಿ ಅವರು ವಿವರಿಸಿದರು.
ಇದೇ ವೇಳೆ, ಈ ಮಹತ್ವದ ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ರಾಜ್ಯ ಸರ್ಕಾರ ಎಸ್‌ಐಟಿ ರಚಿಸುವಂತೆ ತಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ವೈಯಕ್ತಿಕವಾಗಿ ಒತ್ತಡ ಹೇರಿದ್ದಾಗಿಯೂ ಪ್ರಕಾಶ್ ರಾಜ್ ಬಹಿರಂಗಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ತಕ್ಷಣವೇ ಸ್ಪಂದಿಸಿ, ಅತ್ಯಂತ ದಕ್ಷ ಅಧಿಕಾರಿಯಾಗಿರುವ ಪ್ರಣಬ್ ಮೊಹಂತಿ ಅವರ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡಿದರು. ಪ್ರಾಮಾಣಿಕ ಅಧಿಕಾರಿಯನ್ನು ಈ ಜವಾಬ್ದಾರಿಗೆ ನೇಮಿಸಿದ ತಕ್ಷಣ, ತಾವೇ ಖುದ್ದಾಗಿ ಟ್ವೀಟ್ ಮಾಡಿ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದ್ದಾಗಿ ಅವರು ನೆನಪಿಸಿಕೊಂಡರು.
ಕೊನೆಯದಾಗಿ, ಸೌಜನ್ಯ ಕೊಲೆ ಪ್ರಕರಣದ ಗೊಂದಲಗಳ ನಡುವೆಯೇ ಧರ್ಮಸ್ಥಳದ ಸುತ್ತಮುತ್ತ ನೂರಾರು ಹೆಣಗಳನ್ನು ಹೂತುಹಾಕಲಾಗಿದೆ ಎಂಬ ಇಂತಹ ಘೋರ ವಿಚಾರಗಳು ಮುನ್ನೆಲೆಗೆ ಬಂದಾಗ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ತಮಗೆ ಆತಂಕವಾಗಿತ್ತು ಎಂದು ಪ್ರಕಾಶ್ ರಾಜ್ ತಿಳಿಸಿದರು. “ಅಲ್ಲಿ ನಿಜಕ್ಕೂ ಏನಾಗಿದೆ ಎಂಬ ಸತ್ಯ ಸಮಾಜದ ಮುಂದೆ ಬರಬೇಕು. ಕೊಲೆಗಾರರು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆಯಾಗಬೇಕು ಎನ್ನುವ ಒಂದೇ ಒಂದು ಸದಾಶಯದಿಂದ ನಾನು ಚಿನ್ನಯ್ಯನ ಜೊತೆ ಮಾತನಾಡಿದ್ದೆನೇ ಹೊರತು ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ. ಈ ದಾರಂದೇಲಿಯಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಾನೂನು ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದ್ದಾರೆ.








