ಜೋಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾದ ಗೌಟೆಂಗ್ ಪ್ರಾಂತ್ಯದ ಜನನಿಬಿಡ ಪ್ರದೇಶವೊಂದರಲ್ಲಿ ದುಷ್ಕರ್ಮಿಗಳ ಗುಂಪೊಂದು ನಡೆಸಿದ ದಿಢೀರ್ ಗುಂಡಿನ ದಾಳಿಯಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಯೋಜಿತ ದಾಳಿಯ ನಂತರ ಪೊಲೀಸರು ಸುಮಾರು 10 ಕ್ಕೂ ಹೆಚ್ಚು ಶಂಕಿತ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಬಿಳಿ ಬಣ್ಣದ ಟೊಯೋಟಾ ಕ್ವಾಂಟಮ್ ವಾಹನದಲ್ಲಿ ಬಂದ ದುಷ್ಕರ್ಮಿಗಳು, ವಸತಿ ಪ್ರದೇಶದ ಬೇರೆ ಬೇರೆ ಸ್ಥಳಗಳಿಗೆ ನುಗ್ಗಿ ಏಕಕಾಲದಲ್ಲಿ ಮನಬಂದಂತೆ ಗುಂಡಿನ ಸುರಿಮಳೆಗರೆದಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ದಾಳಿಕೋರರು ಎರಡು ಪ್ರತ್ಯೇಕ ಮಾರ್ಗಗಳ ಮೂಲಕ ಆ ಪ್ರದೇಶವನ್ನು ಪ್ರವೇಶಿಸಿದ್ದರು. ಒಂದೇ ಸಮಯದಲ್ಲಿ ಹಲವು ಕಡೆಗಳಲ್ಲಿ ಗುಂಡು ಹಾರಿಸಿ ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಿದ ಅವರು, ನಂತರ ಬಂದಿದ್ದ ವಾಹನದಲ್ಲೇ ಪರಾರಿಯಾಗಿದ್ದಾರೆ.
ಘಟನಾ ಸ್ಥಳದಲ್ಲೇ 12 ಜನರು ಪ್ರಾಣ ಕಳೆದುಕೊಂಡಿದ್ದು, ಗಾಯಗೊಂಡ ಒಂಬತ್ತು ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಗೆ ನಿಖರವಾದ ಕಾರಣವೇನೆಂಬುದು ಇನ್ನು ಪತ್ತೆಯಾಗಿಲ್ಲ ಮತ್ತು ಬುಧವಾರದವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಹೇಳಿಕೆ: “ಇದು ಅತ್ಯಂತ ವ್ಯವಸ್ಥಿತವಾಗಿ ನಡೆದ ದಾಳಿಯಾಗಿದ್ದು, ಕೃತ್ಯದ ಹಿಂದೆ 10 ಕ್ಕೂ ಹೆಚ್ಚು ಅಪರಾಧಿಗಳಿರುವ ಶಂಕೆಯಿದೆ. ಆರೋಪಿಗಳ ಪತ್ತೆಗಾಗಿ ದೊಡ್ಡ ಮಟ್ಟದ ಕಾರ್ಯಾಚರಣೆ ಆರಂಭಿಸಲಾಗಿದೆ.”
ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂಸಾತ್ಮಕ ಅಪರಾಧಗಳು ಗಣನೀಯವಾಗಿ ಹೆಚ್ಚುತ್ತಿವೆ. ವಿಶ್ವದಲ್ಲೇ ಅತಿ ಹೆಚ್ಚು ಕೊಲೆ ಪ್ರಕರಣಗಳು ದಾಖಲಾಗುವ ದೇಶಗಳಲ್ಲಿ ದಕ್ಷಿಣ ಆಫ್ರಿಕಾ ಕೂಡ ಒಂದಾಗಿದ್ದು, ಇಲ್ಲಿ ಪ್ರತಿದಿನ ಸರಾಸರಿ 60 ಕೊಲೆಗಳು ನಡೆಯುತ್ತವೆ ಎಂದು ವರದಿಗಳು ಹೇಳುತ್ತವೆ.
ಪ್ರಸ್ತುತ ನಡೆದಿರುವ ಈ ಭೀಕರ ಸಾಮೂಹಿಕ ಗುಂಡಿನ ದಾಳಿಯು ದೇಶದಲ್ಲಿ ಸಂಘಟಿತ ಅಪರಾಧಗಳು ಮತ್ತು ಗನ್ ಸಂಸ್ಕೃತಿಯ ಬಗ್ಗೆ ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ದಾಳಿಕೋರರ ಬಗ್ಗೆ ಯಾವುದೇ ಮಾಹಿತಿ ಇದ್ದರೂ ಸಾರ್ವಜನಿಕರು ಪೊಲೀಸರಿಗೆ ತಿಳಿಸಬೇಕಾಗಿ ವಿನಂತಿಸಲಾಗಿದೆ.








