ಇಂದಿನ ಗಡಿಬಿಡಿಯ ಜೀವನದಲ್ಲಿ ನಾಲಿಗೆಯ ರುಚಿಗಾಗಿ ನಾವು ತಿನ್ನುವ ‘ಫಾಸ್ಟ್ ಫುಡ್’ ನಮ್ಮ ಪ್ರಾಣಕ್ಕೆ ಸಂಚಕಾರ ತರುತ್ತಿದೆಯೇ? ಹೌದು ಎನ್ನುತ್ತಿದೆ ಐಸಿಎಮ್ಆರ್ (ICMR) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (NIN) ವಿಜ್ಞಾನಿಗಳು ನಡೆಸಿರುವ ಹೊಸ ಸಂಶೋಧನೆ. ಹೈದರಾಬಾದ್ನ 18 ರಿಂದ 24 ವರ್ಷದೊಳಗಿನ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ನಡೆಸಿದ ಈ ಅಧ್ಯಯನದಲ್ಲಿ, ಇಂದಿನ ಯುವ ಪೀಳಿಗೆಯನ್ನು ಕಾಡುತ್ತಿರುವ ಅತಿ ದೊಡ್ಡ ಆರೋಗ್ಯದ ಆತಂಕವೊಂದು ಬಯಲಾಗಿದೆ.
ಏನಿದು ಸಂಶೋಧನೆಯ ಕಟು ಸತ್ಯ?
ಕಡಿಮೆ ಬೆಲೆಗೆ ಸಿಗುತ್ತದೆ, ನಾಲಿಗೆಗೆ ಮಸ್ತ್ ರುಚಿ ನೀಡುತ್ತದೆ ಎಂದು ಯುವಜನತೆ ಮುಗಿಬಿದ್ದು ತಿನ್ನುವ ಪಿಜ್ಜಾ, ಬರ್ಗರ್, ಪ್ಯಾಕೆಟ್ ಚಿಪ್ಸ್, ಚಾಕೊಲೇಟ್ ಹಾಗೂ ಬಣ್ಣಬಣ್ಣದ ತಂಪು ಪಾನೀಯಗಳು (Ultra-Processed Foods) ನೇರವಾಗಿ ಹೃದಯದ ಆರೋಗ್ಯವನ್ನು ಹದಗೆಡಿಸುತ್ತಿವೆ. ಈ ರೀತಿಯ ಸಂಸ್ಕರಿಸಿದ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ ಯುವಕರಲ್ಲಿ ಹೃದಯಾಘಾತದ (Heart Attack) ಭೀತಿ ಶೇಕಡಾ 100 ರಷ್ಟು ಹೆಚ್ಚಾಗುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ವಿಜ್ಞಾನಿಗಳು 311 ಕಾಲೇಜು ವಿದ್ಯಾರ್ಥಿಗಳ ಮೇಲೆ ನಡೆಸಿದ ಕ್ಲಿನಿಕಲ್ ಪರೀಕ್ಷೆಯಲ್ಲಿ ಕೆಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ:
ಮೂರು ಪಟ್ಟು ಹೆಚ್ವು ಬಿಪಿ: ಅಲ್ಟ್ರಾ-ಪ್ರಾಸೆಸ್ಡ್ ಆಹಾರ ಇಷ್ಟಪಡುವ ಯುವಕರಲ್ಲಿ ಅಧಿಕ ರಕ್ತದೊತ್ತಡದ (High BP) ಸಮಸ್ಯೆ ಸಾಮಾನ್ಯರಿಗಿಂತ 3 ಪಟ್ಟು ಹೆಚ್ಚಾಗಿದೆ.
ಚಿಕ್ಕ ವಯಸ್ಸಿನಲ್ಲೇ ಕಾಡುವ ಕಾಯಿಲೆ: ಪರೀಕ್ಷೆಗೊಳಗಾದವರಲ್ಲಿ ಈಗಾಗಲೇ ಶೇ. 12.5 ರಷ್ಟು ಯುವಕರು ಹೈ ಬಿಪಿಯಿಂದ ಬಳಲುತ್ತಿರುವುದು ಪತ್ತೆಯಾಗಿದೆ.
ಅಪಾಯದ ಮುನ್ಸೂಚನೆ: 20 ವರ್ಷ ತುಂಬುವ ಮುನ್ನವೇ ರಕ್ತದೊತ್ತಡ ಹೆಚ್ಚಾದರೆ, ಭವಿಷ್ಯದಲ್ಲಿ ಪಾರ್ಶ್ವವಾಯು (Stroke) ಮತ್ತು ಕಿಡ್ನಿ ವೈಫಲ್ಯದ (Kidney Failure) ಅಪಾಯ ಗ್ಯಾರಂಟಿ.
ಜಂಕ್ ಫುಡ್ಗೆ ಯುವಕರು ದಾಸರಾಗುತ್ತಿರುವುದು ಏಕೆ?
ಫಾಸ್ಟ್ ಫುಡ್ಗಳಲ್ಲಿ ಬಳಸುವ ಮೋನೊಸೋಡಿಯಂ ಗ್ಲುಟಮೇಟ್ (ಅಜಿನೊಮೊಟೊ), ಅತಿಯಾದ ಉಪ್ಪು (ಸೋಡಿಯಂ) ಮತ್ತು ಸ್ಯಾಚುರೇಟೆಡ್ ಕೊಬ್ಬುಗಳು ಮೆದುಳನ್ನು ಪ್ರಚೋದಿಸಿ, ಯುವಕರು ಮತ್ತೆ ಮತ್ತೆ ಅದನ್ನೇ ತಿನ್ನುವಂತೆ ಪ್ರೇರೇಪಿಸುತ್ತವೆ. ಇವುಗಳಲ್ಲಿರುವ ರಾಸಾಯನಿಕಗಳು ಮತ್ತು ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳನ್ನು ಬ್ಲಾಕ್ ಮಾಡುವುದರಿಂದ, ಹದಿಹರೆಯದವರಲ್ಲಿಯೂ ಸೈಲೆಂಟ್ ಆಗಿ ಹಾರ್ಟ್ ಅಟ್ಯಾಕ್ ಸಂಭವಿಸುತ್ತಿದೆ.
ಪರಿಹಾರವೇನು? ವಿಜ್ಞಾನಿಗಳ ಸಲಹೆ
ಮುಂದಿನ ಪೀಳಿಗೆ ವೃದ್ಧಾಪ್ಯಕ್ಕೆ ಕಾಲಿಡುವ ಮುನ್ನವೇ ರೋಗಿಷ್ಟರಾಗುವುದನ್ನು ತಪ್ಪಿಸಬೇಕಾದರೆ ಈಗಲೇ ಎಚ್ಚೆತ್ತುಕೊಳ್ಳಬೇಕು. ಕಾಲೇಜುಗಳಲ್ಲಿ ಪೌಷ್ಟಿಕ ಆಹಾರದ ಬಗ್ಗೆ ವಿಶೇಷ ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ICMR-NIN ವಿಜ್ಞಾನಿಗಳ ತಂಡ ತಿಳಿಸಿದೆ.
ನಾಲಿಗೆಯ ರುಚಿಗಿಂತ ಜೀವ ಮುಖ್ಯ. ಪ್ಯಾಕ್ ಮಾಡಿದ ಕೃತಕ ಆಹಾರಗಳ ವ್ಯಾಮೋಹದಿಂದ ಹೊರಬಂದು, ಮನೆಯಲ್ಲಿ ತಯಾರಿಸಿದ ಸಾಂಪ್ರದಾಯಿಕ ಮತ್ತು ಪೌಷ್ಟಿಕ ಆಹಾರಗಳನ್ನು ರೂಢಿಸಿಕೊಳ್ಳುವುದು ಇಂದಿನ ಯುವ ಪೀಳಿಗೆಗೆ ಅತಿ ಅವಶ್ಯಕವಾಗಿದೆ.ನಿಮ್ಮ ಆಹಾರದ ಆಯ್ಕೆಯೇ ನಿಮ್ಮ ಆಯಸ್ಸನ್ನು ನಿರ್ಧರಿಸುತ್ತದೆ; ಇಂದಿನ ಜಂಕ್ ಫುಡ್ ವ್ಯಾಮೋಹ ನಾಳಿನ ಜೀವಕ್ಕೆ ಕಂಟಕವಾಗದಿರಲಿ.








