ದೇಶದ ವಾಯುವ್ಯ ಮತ್ತು ಮಧ್ಯ ಭಾಗಗಳಲ್ಲಿ ಭೀಕರ ಬಿಸಿಗಾಳಿ (Heatwave) ಆವರಿಸಿದ್ದು, ಸೋಮವಾರದಂದು ತಾಪಮಾನವು 45 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಮುಂಬರುವ ವಾರದಲ್ಲಿ ಹಲವು ರಾಜ್ಯಗಳಲ್ಲಿ ಈ ತೀವ್ರ ಹವಾಮಾನ ಪರಿಸ್ಥಿತಿ ದೀರ್ಘಕಾಲ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ನೆಚ್ಚರಿಕೆ ನೀಡಿದೆ.
ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ದೆಹಲಿ ರಾಜ್ಯಗಳು ಸೋಮವಾರ (ಮೇ 18) ದಿಂದ ಮೇ 24 ರವರೆಗೆ ಬಿಸಿಗಾಳಿಯ ಪ್ರಭಾವಕ್ಕೆ ಒಳಗಾಗಲಿವೆ. ಇನ್ನು ಉತ್ತರ ಪ್ರದೇಶದಲ್ಲಿ ಮಂಗಳವಾರದಿಂದ ತೀವ್ರ ಭೀಕರ ಬಿಸಿಗಾಳಿ (Severe heatwave) ಕಂಡುಬರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಜಾಬ್, ರಾಜಸ್ಥಾನ ಮತ್ತು ದೆಹಲಿಯಲ್ಲಿ ತಲ್ಲಣ ಮೂಡಿಸಿದ ಬಿಸಿಲು
ಹಲವು ಪ್ರದೇಶಗಳಲ್ಲಿ ತಾಪಮಾನವು ಅಪಾಯಕಾರಿ ಮಟ್ಟಕ್ಕೆ ಏರಿದ್ದು, ಪಂಜಾಬ್ನ ಬತಿಂಡಾದಲ್ಲಿ ಬರೋಬ್ಬರಿ 47 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಹರಿಯಾಣ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲೂ ಉಷ್ಣಾಂಶ 46 ಡಿಗ್ರಿ ದಾಟಿದ್ದು, ಪ್ರಸಕ್ತ ಬಿಸಿಗಾಳಿಯ ಭೀಕರತೆಯನ್ನು ಎತ್ತಿ ತೋರಿಸುತ್ತಿದೆ.
ದೆಹಲಿಯಲ್ಲಿ ತಾಪಮಾನ ಸುಮಾರು 44 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಐಎಂಡಿಯ ಸಫ್ದರ್ಜಂಗ್ ಕೇಂದ್ರದಲ್ಲಿ 43.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇನ್ನು ರಿಡ್ಜ್ (Ridge) ಕೇಂದ್ರದಲ್ಲಿ 44.6 ಡಿಗ್ರಿ ಹಾಗೂ ಲೋಧಿ ರೋಡ್ನಲ್ಲಿ 43.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬಂದಿದೆ. ಇದು ಸಾಮಾನ್ಯಕ್ಕಿಂತ ಸುಮಾರು 5 ಡಿಗ್ರಿಯಷ್ಟು ಹೆಚ್ಚಾಗಿದ್ದು, ಕಳೆದ ಎರಡು ವರ್ಷಗಳಲ್ಲೇ ಮೇ ತಿಂಗಳ ಅತ್ಯಂತ ಬಿಸಿಯಾದ ದಿನವಾಗಿದೆ.
”ರಾಜಸ್ಥಾನದ ಥಾರ್ ಮರುಭೂಮಿ ಮತ್ತು ಮಧ್ಯ ಪಾಕಿಸ್ತಾನದ ಭಾಗಗಳಿಂದ ವಾಯುವ್ಯ ಮಾರುತಗಳು ರಾಜಧಾನಿ ದೆಹಲಿಗೆ ಬೀಸುತ್ತಿವೆ. ವಿಶಾಲವಾದ ಶುಷ್ಕ ಪ್ರದೇಶಗಳನ್ನು ದಾಟಿ ಬರುವ ಈ ಗಾಳಿಯು ದೆಹಲಿಯನ್ನು ತಲುಪುವಷ್ಟರಲ್ಲಿ ತೀವ್ರ ಒಣಹವೆಯಾಗಿ ಬದಲಾಗುತ್ತದೆ. ಇದು ಮೇಲ್ಮೈ ಹತ್ತಿರ ಶಾಖವನ್ನು ಹಿಡಿದಿಟ್ಟುಕೊಳ್ಳುವುದರಿಂದ ನಗರದಾದ್ಯಂತ ಉಷ್ಣಾಂಶ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ,” ಎಂದು ಸ್ಕೈಮೆಟ್ ವೆದರ್ನ ಮಹೇಶ್ ಪಲಾವತ್ ಹೇಳಿದ್ದಾರೆ.
ಹಗಲಿನ ತೀವ್ರ ತಾಪಮಾನ ಮತ್ತು ಮಳೆಯ ಕೊರತೆಯಿಂದಾಗಿ ರಾತ್ರಿಯ ತಾಪಮಾನವೂ ಸಹ ಅಧಿಕವಾಗಿಯೇ ಉಳಿದಿದೆ ಎಂದು ಅವರು ಮುಂದುವರಿದು ತಿಳಿಸಿದ್ದಾರೆ.
ಮುಂದಿನ 10 ದಿನಗಳವರೆಗೆ ಯಾವುದೇ ಗುಡುಗು ಸಹಿತ ಮಳೆ ಅಥವಾ ಮುಂಗಾರು ಪೂರ್ವ ಮಳೆಯ ಮುನ್ಸೂಚನೆ ಇಲ್ಲದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ದೆಹಲಿಯಲ್ಲಿ ವಿದ್ಯುತ್ ಬೇಡಿಕೆಯೂ ಗಣನೀಯವಾಗಿ ಏರಿಕೆಯಾಗಿದ್ದು, ಈ ಬೇಸಿಗೆಯಲ್ಲೇ ಗರಿಷ್ಠ ಮಟ್ಟವಾದ 7542 ಮೆಗಾವ್ಯಾಟ್ (MW) ತಲುಪಿದೆ.
ಮೇ 24 ರವರೆಗೆ ಸಿಗಲ್ಲ ಮುಕ್ತಿ
ದೆಹಲಿಗೆ ಐಎಂಡಿ ‘ಯೆಲ್ಲೋ ಅಲರ್ಟ್’ ಘೋಷಿಸಿದ್ದು, ಮುಂದಿನ ಎರಡು ದಿನಗಳಲ್ಲಿ ತಾಪಮಾನ 45 ಡಿಗ್ರಿ ತಲುಪಬಹುದು ಎಂದು ಎಚ್ಚರಿಸಿದೆ. ಮೇ 24 ರವರೆಗೆ ವಾಯುವ್ಯ ಭಾರತದಾದ್ಯಂತ ತಾಪಮಾನವು ಹಂತಹಂತವಾಗಿ 2 ರಿಂದ 3 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಬಿಸಿಗಾಳಿಯ ವಾತಾವರಣ ಮುಂದುವರಿಯಲಿದೆ.
ರಾಜಸ್ಥಾನದ ಪಿಲಾನಿ ಮತ್ತು ಚಿತ್ತೋರ್ಗಢದಲ್ಲಿ ತಲಾ 46.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಶ್ರೀ ಗಂಗಾನಗರದಲ್ಲಿ 46.1 ಡಿಗ್ರಿ ದಾಖಲಾಗಿದೆ. ರಾಜ್ಯದ ಬಹುತೇಕ ಎಲ್ಲಾ ನಗರಗಳು 41 ಡಿಗ್ರಿ ಗಡಿ ದಾಟಿದ್ದು, ಜೈಪುರದಲ್ಲಿ 43.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇತ್ತು.
ಪಂಜಾಬ್ ಮತ್ತು ಹರಿಯಾಣ ಕೂಡ ತೀವ್ರ ಉಷ್ಣದ ಒತ್ತಡಕ್ಕೆ ಸಿಲುಕಿದ್ದು, ಚಂಡೀಗಢದಲ್ಲಿ ಈ ಹಂಗಾಮಿನ ಅತ್ಯಂತ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹರಿಯಾಣದ ರೋಹ್ಟಕ್, ಹಿಸಾರ್ ಮತ್ತು ನರ್ನಾಲ್ನಲ್ಲಿ 44 ಡಿಗ್ರಿ ಪಾದರಸ ದಾಟಿದೆ.
ಮುಂದಿನ ದಿನಗಳಲ್ಲಿ ಮಧ್ಯಪ್ರದೇಶ, ಛತ್ತೀಸ್ಗಢ, ಮಹಾರಾಷ್ಟ್ರ ಮತ್ತು ಪೂರ್ವ ಭಾರತದ ಕೆಲವು ಭಾಗಗಳಿಗೂ ಇಂತಹದೇ ಪರಿಸ್ಥಿತಿ ವಿಸ್ತರಿಸಬಹುದು ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ
ಬಿಸಿಲಿನಿಂದ ಆರೋಗ್ಯದ ಮೇಲಾಗುವ ಅಪಾಯಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (DGHS) ಮಾರ್ಗಸೂಚಿಯೊಂದನ್ನು ಹೊರಡಿಸಿದೆ. ಸಾರ್ವಜನಿಕರು ನಿರಂತರವಾಗಿ ನೀರು ಕುಡಿಯುತ್ತಿರಬೇಕು, ಮಧ್ಯಾಹ್ನದ ಉತ್ತುಂಗದ ಅವಧಿಯಲ್ಲಿ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು ಮತ್ತು ತಿಳಿ ಹತ್ತಿ ಬಟ್ಟೆಗಳನ್ನು ಧರಿಸಬೇಕು ಎಂದು ಸೂಚಿಸಿದೆ. ದೇಹವನ್ನು ತಂಪಾಗಿಸುವ ಪಾನೀಯಗಳು, ಎಲೆಕ್ಟ್ರೋಲೈಟ್ ಅಂಶವಿರುವ ದ್ರವ ಪದಾರ್ಥಗಳನ್ನು ಸೇವಿಸಲು ಮತ್ತು ಹೊರಾಂಗಣ ಸಂಚಾರವನ್ನು ಕಡಿಮೆ ಮಾಡಲು ಶಿಫಾರಸು ಮಾಡಿದೆ.








